ಜಿಲ್ಲೆಯ ಅನ್ನದಾತನಿಗೆ ಅನ್ಯಾಯ ಮಾಡದಿರಿ

KannadaprabhaNewsNetwork |  
Published : May 28, 2024, 01:05 AM IST
ಕೆನಾಲ್ ಕಾಮಗಾರಿ ತಕ್ಷಣವೇ ನಿಲ್ಲಿಸಿ | Kannada Prabha

ಸಾರಾಂಶ

ತುಮಕೂರು ಮೂಲ ನಾಲೆಗೆ ಧಕ್ಕೆ ತರುವ ಮಾಗಡಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕು. ಮಾಗಡಿಗೆ ಹಂಚಿಕೆಯಾಗಿರುವ ನೀರನ್ನು ಮೂಲ ನಾಲೆಯ ಮೂಲಕವೇ ತೆಗೆದುಕೊಂಡು ಹೋಗಬೇಕು.

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಮೂಲ ನಾಲೆಗೆ ಧಕ್ಕೆ ತರುವ ಮಾಗಡಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕು. ಮಾಗಡಿಗೆ ಹಂಚಿಕೆಯಾಗಿರುವ ನೀರನ್ನು ಮೂಲ ನಾಲೆಯ ಮೂಲಕವೇ ತೆಗೆದುಕೊಂಡು ಹೋಗಬೇಕು. ಸರ್ಕಾರ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ, ಗೊಂದಲಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಂಯುಕ್ತ ಕರ್ನಾಟಕ-ಕರ್ನಾಟಕ ವತಿಯಿಂದ ಮೇ 29 ಬೆಳಗ್ಗೆ 11 ಗಂಟೆಗೆ ಹೇಮಾವತಿ ಮುಖ್ಯ ಇಂಜಿನಿಯರ್ ಕಚೇರಿ ಮುತ್ತಿಗೆ ಹಾಕುವ ಮೂಲಕ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎ.ಗೋವಿಂದರಾಜು ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯು ಬರಗಾಲದ ಪರಿಸ್ಥಿತಿಯಲ್ಲಿದ್ದು, ರೈತರ ಬೆಳೆಗಳು ಒಣಗುತ್ತಿವೆ. ತುಮಕೂರು ಶಾಖಾ ನಾಲೆಯಿಂದ ನೇರವಾಗಿ ಮಾಗಡಿಗೆ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಕಾಮಗಾರಿಯನ್ನು ಆರಂಭಿಸಿ ಜನರಲ್ಲಿ ಸರ್ಕಾರ ಆತಂಕ ಸೃಷ್ಟಿ ಮಾಡಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಮತ್ತು ನಾಗರಿಕರು ಕುಡಿಯುವ ನೀರಿಗೆ, ನೀರಾವರಿಗೆ ಹೇಮಾವತಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಹೇಮಾವತಿ ನೀರನ್ನು ನೆಚ್ಚಿಕೊಂಡೇ ಬದುಕನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದ ನೀರಿನ ಹಂಚಿಕೆಯ ವ್ಯತ್ಯಯವು ತೀವ್ರವಾದ ಕೃಷಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದರು.ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ತುಮಕೂರು ಹೇಮಾವತಿ ನಾಲಾ ವಲಯಕ್ಕೆ 25.31 ಟಿಎಂಸಿ ನೀರನ್ನು ನಿಗದಿಪಡಿಸಿ ಹೊಸದಾಗಿ ಕೆಲವು ಪ್ರದೇಶ ಸೇರಿಸಿದ್ದಾರೆ. ಅದರಂತೆ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ. ಆದರೆ ಇದುವರೆಗೂ ತುಮಕೂರು ನಾಲಾ ವಲಯಕ್ಕೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರು ದೊರಕಿಲ್ಲ ಎಂದು ಹೇಳಿದರು.

25.31 ಟಿಎಂಸಿ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಆದ್ದರಿಂದ ತುಮಕೂರು ಜಿಲ್ಲೆಗೆ ಬರಬೇಕಾದ ನೀರಿನ ಹಂಚಿಕೆಯನ್ನು ಮೊದಲು ಖಚಿತಪಡಿಸಬೇಕು. ಲಿಂಕ್ ಕೆನಾಲ್‌ ನಿರ್ಮಾಣದಿಂದಾಗಿ ಜಿಲ್ಲೆಗೆ ಬರುವ ಅಲ್ಪಸ್ವಲ್ಪ ನೀರು ಭಾಗವಾಗಿ ಮಾಗಡಿಗೆ ಹರಿದು ಹೋಗಬಹುದೆಂದು ಆತಂಕ ತುಮಕೂರು ಜಿಲ್ಲೆಯ ಜನರಲ್ಲಿದೆ ಎಂದರು.

ಈಗಾಗಲೇ ಶಾಖಾ ನಾಲೆಯಿಂದ ಕುಣಿಗಲ್‌ರೆಗೂ ಹೇಮಾವತಿ ನೀರು ಹೋಗುತ್ತಿದೆ. ಇತ್ತೀಚಿಗೆ ಕೋಟ್ಯಾಂತರ ಹಣವನ್ನು ಮೂಲ ನಾಲೆಯ ಅಗಲೀಕರಣ ಮತ್ತು ನಾಲಾ ಅಭಿವೃದ್ಧಿ ಕೆಲಸ ನಡೆದಿದೆ. ಇದೇ ನಾಲೆಯ ಮೂಲಕ ಮಾಗಡಿಗೆ ನೀರನ್ನು ತೆಗೆದುಕೊಂಡು ಹೋಗಬಹುದಿತ್ತು. ಅದು ಸುಲಭ ಮತ್ತು ಖರ್ಚೂ ಕಡಿಮೆ. ಆದರೆ ಅದಕ್ಕೆ ಬದಲಿಗೆ ಗುಬ್ಬಿಯಿಂದ ಹೊಸದಾಗಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಮತ್ತೆ ಕೋಟ್ಯಾಂತರ ಹಣ ದುಂದುವೆಚ್ಚವಾಗುತ್ತದೆ. ರೈತರ ಭೂಮಿ ಸ್ವಾಹ ಆಗುತ್ತದೆ. ಅಂತಿಮವಾಗಿ ಇದರ ಹೊರ ಜನರ ಮೇಲೆ ಬೀಳುತ್ತದೆ. ಹಾಗಾಗಿ ಯೋಜನೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದರು.ಎಐಕೆಕೆಎಂಎಸ್‌ನ ಎಸ್.ಎನ್.ಸ್ವಾಮಿ ಮಾತನಾಡಿ, ನೀರಿನ ಹಂಚಿಕೆ ಬಹಳ ಸೂಕ್ಷ್ಮ ವಿಷಯವಾಗಿದೆ. ಅಂತಹ ವಿಷಯದಲ್ಲಿ ಸರ್ಕಾರ ಕೇವಲ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡು ಜಿಲ್ಲೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಜೊತೆಗೆ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರನ್ನು ಪರಸ್ಪರ ವಿರೋಧಿಗಳಂತೆ ಚಿತ್ರಿಸಲು ಹೊರಟಿದೆ. ಮಾಗಡಿಗೆ ನೀರು ಹರಿಸಲು ಯಾವ ರೀತಿಯಲ್ಲೂ ಅಭ್ಯಂತರವಿಲ್ಲ ಮತ್ತು ವಿರೋಧಿಸಲೂ ಸಾಧ್ಯವೇ ಇಲ್ಲ. ಆದರೆ ತುಮಕೂರಿಗೆ ಅನ್ಯಾಯವಾಗಬಾರದು ಎಂದರು.ಅಖಿಲ ಭಾರತ ಕಿಸಾನ್ ಸಭಾದ ಕಂಬೇಗೌಡ ಮಾತನಾಡಿ, ಎಕ್ಸ್‌ಪ್ರೆಸ್‌ ಕೆನಾಲ್‌ನಿಂದ ಜಿಲ್ಲೆಗೆ ತೀವ್ರ ತೊಂದರೆಯಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನೀರು ಹಂಚಿಕೆಯಾಗಿರುವ ಭಾಗಗಳಿಗೆ ಮೂಲ ನಾಲೆಯ ಮುಖಾಂತರವೇ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು. ರೈತರ ಭೂಮಿಯನ್ನು ಕಿತ್ತುಕೊಂಡು ರೈತ ಸಮುದಾಯಕ್ಕೆ ತೊಂದರೆ ನೀಡುವ ಆವೈಜ್ಞಾನಿಕ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಕೆಲಸ ನಿಲ್ಲಿಸಬೇಕು. ಮೇ 29 ರಂದು ಸಂಯುಕ್ತ ಹೋರಾಟ-ಕರ್ನಾಟಕದೊಂದಿಗೆ ಗುರುತಿಸಿಕೊಂಡಿರುವ ಎಲ್ಲಾ ರೈತ, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಹೇಮಾವತಿ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕುತಿದ್ದು, ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಿ.ಉಮೇಶ್, ಸಿಪಿಐ(ಎಂ)ನ ಎನ್.ಕೆ.ಸುಬ್ರಮಣ್ಯ, ಕರ್ನಾಟಕ ರಾಜ್ಯ ರೈತ ಸಂಘದ ಕೊರಟಗೆರೆ ತಾಲೂಕು ಕಾರ್ಯದರ್ಶಿ ಶಬ್ಬೀರ್ ಪಾಷ ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು