ಹುಬ್ಬಳ್ಳಿ:
ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆಯಾದ ಬಳಿಕ ಪೊಲೀಸ್ ಕಮಿಷನರೇಟ್ ಎಚ್ಚೆತ್ತುಕೊಂಡಿದೆ. ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಬಹಳ ದಿನಗಳಿಂದ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದು ವಿಶೇಷ.ಇದೇ ಠಾಣೆ ವ್ಯಾಪ್ತಿಯಲ್ಲೇ ನೇಹಾ ಹಾಗೂ ಅಂಜಲಿ ಅವರ ಮನೆಗಳಿರುವುದು. ಈ ಠಾಣೆ ವ್ಯಾಪ್ತಿಯಲ್ಲೇ ಇತ್ತೀಚಿಗೆ ಅಪರಾಧ ಪ್ರಕರಣ, ಗಾಂಜಾ ಮಾರಾಟ ಸೇರಿದಂತೆ ವಿವಿಧ ಪ್ರಕರಣಗಳು ಹೆಚ್ಚಾಗಿದ್ದವು. ಜತೆಗೆ ಅಂಜಲಿಗೆ ಕೊಲೆ ಬೆದರಿಕೆ ಇತ್ತು ಎಂದು ಆಕೆಯ ಅಜ್ಜಿ ಹಾಗೂ ಸಹೋದರಿ ಇಬ್ಬರು ಬಂದು ಠಾಣೆಗೆ ತಿಳಿಸಿದ್ದರೂ ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಈ ಠಾಣೆ ವ್ಯಾಪ್ತಿಯಲ್ಲಿ ಕುಸಿದಿದೆ ಎಂಬ ಆರೋಪ ಸಾಮಾನ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಹಲವು ರೌಡಿ ಶೀಟರ್‌ಗಳ ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸಿದರು. ರೋಹಿತ್ ವಿನೋದ ಕಲಾಲ, ಇಸ್ಮಾಯಿಲ್ ಮೆಹಬೂಬಸಾಬ್ ಬಾರದ್ವಾಲೆ, ಫಜಲ್ ತಾಜುದ್ದೀನ್ ಪುಣೆವಾಲೆ, ದಾವಲಸಾಬ್ ತಾಜವುದ್ದೀನ್ ಪುಣೆವಾಲೆ, ವಿನೋದ ಪರಶುರಾಮ ಗುಡಿಹಾಳ, ಸಾಹಿಲ್‌ಭಕ್ಷ ರಫೀಕ ಚಡ್ಡಾ, ಪ್ರದೀಪ ಪ್ರಕಾಶ ಕಾಗೋಡ, ಪುಟ್ಟರಾಜು ಪ್ರಕಾಶ ಕೂಗೋಡ ಸೇರಿದಂತೆ ಹಲವು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಲಾಯಿತು.ಎಚ್ಚರಿಕೆ:
ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಬಾರದು. ಗಾಂಜಾ ಮಾರಾಟ, ಶಸ್ತ್ರಾಸ್ತ್ರ ಇಟ್ಟುಕೊಂಡು ತಿರುಗಾಡುವುದು, ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾದರೆ, ಗಡೀಪಾರು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.ಇಬ್ಬರ ಬಂಧನ:
ಇದೇ ವೇಳೆ ಬೆಂಡಿಗೇರಿ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಭಿಷೇಕ ಕುಮಾರ ಭಜಂತ್ರಿ ಹಾಗೂ ಎನ್‌ಡಿಪಿಎಸ್ ಕಾಯ್ದೆಯಲ್ಲಿ ಅರೆಸ್ಟ್ ವಾರೆಂಟ್ ಆಗಿದ್ದ, ಹಲ್ಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ ಅರುಣ ಅಲಿಯಾಸ್ ಗುಂಡ್ಯಾ ಮಂಜುನಾಥ ಹಲಗಿ ಎಂಬಿಬ್ಬರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.