ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ತನ್ನದೇ ಇತಿಹಾಸ, ಪರಂಪರೆ ಇದೆ. ಆದ್ದರಿಂದ ದೇಶದ ಪ್ರಮುಖ ಪಾರಂಪರಿಕ ನಗರಗಳಲ್ಲಿ ಮೈಸೂರು ಕೂಡ ಒಂದು. ಬನಾರಸ್, ವಾರಣಸಿಯಂತೆ ಮೈಸೂರು ಪಾರಂಪರಿಕ ನಗರ. ಸಾವಿರಾರು ವರ್ಷಗಳ ಇತಿಹಾಸ ಮೈಸೂರಿಗೆ ಇದೆ ಎಂದರು.
ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಮೈಸೂರನ್ನು ವಿಭಾಗಿಸಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯವು ತಮಿಳುನಾಡಿನ ಶ್ರೀರಂಗಂವರೆಗೆ ವಿಸ್ತರಿಸಿತ್ತು. ಇದನ್ನು ಅರಿಯದವರು ಮೈಸೂರಿನ ಇತಿಹಾಸ ಮತ್ತು ಪರಂಪರೆಯನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಓದಿಗಾಗೋ, ವ್ಯಾಪಾರಕ್ಕೋ ಬಂದು ಮೈಸೂರು ಸೇರಿ ಇಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಇದ್ದುಕೊಂಡು ನಕಲಿ ದಾಖಲೆ ಇಟ್ಟುಕೊಂಡು ಕಳಂಕ ತರಲು ಆರಂಭಿಸಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.ಪ್ರಿನ್ಸೆಸ್ ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬದಲಾಯಿಸಲು ಮುಂದಾಗಿದ್ದರಿಂದ ಈ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂಬ ಗುಂಪು ಕಾಂಗ್ರೆಸ್ಸಿಲ್ಲಿಯೇ ಇದೆ. ಸಿದ್ದರಾಮಯ್ಯ ಹೆಸರಿಗೆ ಇನ್ನಷ್ಟು ಮೆರಗು ಕೊಡಬೇಕು ಎಂಬ ಮುತುವರ್ಜಿಯಲ್ಲಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಅವರ ಹಿಂಬಾಲಕರು ಮಾಡುತ್ತಿದ್ದಾರೆ ಎಂದು ಅವರು ಮೊದಲಿಸಿದರು.
ಪ್ರತಿಯೊಂದಕ್ಕೂ ಫೊರೆನ್ಸಿಕ್ ಲ್ಯಾಬ್ ಪರೀಕ್ಷೆ ಎನ್ನುತ್ತಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು ಯಾಕೆ ಲ್ಯಾಬ್‌ಗೆ ಹೋಗಲಿಲ್ಲ. ಜಯಲಕ್ಷ್ಮೀಪುರಂ ಹೆಸರು ಹೇಗೆ ಬಂತು, 1893 ರಲ್ಲಿ ಸಯ್ಯಾಜಿರಾವ್ ರಸ್ತೆಗೆ ಹೇಗೆ ನಾಮಕರಣ ಮಾಡಲಾಯಿತು ಎಂಬುದು ಗೊತ್ತಿದೆಯೇ? ಇಷ್ಟೆಲ್ಲಾ ಆದರೂ ಕೊನೆಯ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಹೆಸರನ್ನು ಯಾವ ರಸ್ತೆಗೆ ಇಡಲಾಗಿದೆ ಎಂದು ಅವರು ಪ್ರಶ್ನಿಸಿದರು.
ನಾವು ಈಗ ರೇಸ್ ಕೋರ್ಸ್ ರಸ್ತೆ ಎನ್ನುತ್ತೇವಲ್ಲ, ಅದರ ಹೆಸರು ಕಂಠಿರವ ನರಸಿಂಹರಾಜ ಬುಲೇವಾರ್ಡ್ ರಸ್ತೆ ಎಂದು ಲಕ್ಷ್ಮಣಗೆ ಗೊತ್ತಾ? ಮೊದಲು ಮೈಸೂರಿನ ಇತಿಹಾಸ ಪರಂಪರೆ ತಿಳಿದುಕೊಳ್ಳಿ. ಮೈಸೂರು ನಗರವನ್ನು ಕಷ್ಟಪಟ್ಟು ಮಹಾರಾಜರು ಕಟ್ಟಿದ್ದಾರೆ. ಆ ವಂಶಸ್ಥರು ದತ್ತು ತೆಗೆದುಕೊಂಡರೆ ಇವರಿಗೇನು ಸಂಕಟ. ಸೋತ ಮೇಲೆ ಬಾಯಿ ಮುಚ್ಚಿಕೊಂಡು ಇರಬೇಕಲ್ಲವೇ ಎಂದು ಅವರು ಕಿಡಿಕಾರಿದರು.