ನೌಕರಿಗಾಗಿ ಕಲಿಯಬೇಡಿ, ಬದುಕಿಗಾಗಿ ಕಲಿಯಿರಿ

KannadaprabhaNewsNetwork |  
Published : Oct 10, 2025, 01:02 AM IST
ಬಾಗಲಕೋಟೆ ತಾಲೂಕಿನ ತಿಮ್ಮಾಪುರದಲ್ಲಿ ಬಿಟಿಡಿಎ ಅಧ್ಯಕ್ಷರೂ ಆದ ಶಾಸಕ ಎಚ್.ವೈ.ಮೇಟಿ ಅವರನ್ನು ಗ್ರಾಮದ ಹಿರಿಯರು ಸನ್ಮಾನಿಸಿದರು. | Kannada Prabha

ಸಾರಾಂಶ

ತಿಯೊಬ್ಬ ಮಕ್ಕಳೂ ಪ್ರೌಢ ಶಾಲೆಗೆ ಸೇರಬೇಕು. ಯಾರೇ ಶಾಲೆ ಬಿಟ್ಟಿದ್ದರೂ ಪುನಃ ಶಾಲೆಗೆ ಸೇರಿಸಬೇಕು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸರ್ಕಾರಿ ನೌಕರಿ ಸಿಗುತ್ತದೆ ಎಂದು ಶಿಕ್ಷಣ ಕಲಿಯಬಾರದು, ಬದುಕಿಗಾಗಿ ಶಿಕ್ಷಣ ಕಲಿಯಬೇಕು. ನಾನು 8ನೇ ತರಗತಿಗೇ ಶಿಕ್ಷಣ ಕಲಿಯುವುದನ್ನು ಬಿಟ್ಟೆ. ಪದವಿ ಶಿಕ್ಷಣ ವರೆಗೆ ಕಲಿಯಲಿಲ್ಲ ಎಂಬ ಕೊರಗಿದೆ. ಹೀಗಾಗಿ ನಮ್ಮೂರಿನ ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರಿ ಪ್ರೌಢಶಾಲೆ ಆರಂಭಿಸಲಾಗಿದೆ. ಎಲ್ಲರೂ ಇದರ ಪ್ರಯೋಜನೆ ಪಡೆಯಬೇಕು ಎಂದು ಬಿಟಿಡಿಎ ಅಧ್ಯಕ್ಷರೂ ಆದ ಶಾಸಕ ಎಚ್.ವೈ.ಮೇಟಿ ಹೇಳಿದರು.

ತಾಲೂಕಿನ ತಿಮ್ಮಾಪುರದಲ್ಲಿ ಸಿಎಸ್‌ಆರ್ (ಮೂರು ವರ್ಷ ಶಾಸಕರ ಸ್ವಂತ ಹಣದಲ್ಲಿ ನಿರ್ವಹಣೆ) ಯೋಜನೆಯಡಿ ಸರ್ಕಾರಿ ನೂತನ ಪ್ರೌಢಶಾಲೆ ಉದ್ಘಾಟಿಸಿ ಅವರು ಮಾತನಾಡಿದರು. ತಿಮ್ಮಾಪುರಕ್ಕೆ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇತ್ತು. ಇಲ್ಲಿನ ಮಕ್ಕಳು, ಪ್ರೌಢ ಶಾಲೆಗಾಗಿ ಬೋಡನಾಯಕನದಿನ್ನಿ ಅಥವಾ ರಾಂಪುರಕ್ಕೆ ಹೋಗಬೇಕಾಗಿತ್ತು. ಇಲ್ಲಿಯೇ ಪ್ರೌಢ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಮೂರು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೆ. ಈ ವರ್ಷ ಸರ್ಕಾರ ಅನುಮೋದನೆ ನೀಡಿದೆ. ನಮ್ಮೂರಿನ ಪ್ರತಿಯೊಬ್ಬ ಮಕ್ಕಳೂ ಪ್ರೌಢ ಶಾಲೆಗೆ ಸೇರಬೇಕು. ಯಾರೇ ಶಾಲೆ ಬಿಟ್ಟಿದ್ದರೂ ಪುನಃ ಶಾಲೆಗೆ ಸೇರಿಸಬೇಕು ಎಂದು ಪಾಲಕರಿಗೆ ತಿಳಿಸಿದರು.

ಎಷ್ಟೇ ಖರ್ಚು ಬಂದರೂ ನೋಡಿಕೊಳ್ಳುವೆ:

ಈ ಶಾಲೆಯನ್ನು ಮೂರು ವರ್ಷ ನಾನೇ ಸ್ವಂತ ಖರ್ಚಿನಲ್ಲಿ ನೋಡಿಕೊಳ್ಳಬೇಕು. ಸಿಎಸ್‌ಆರ್‌ ಯೋಜನೆಯಡಿ ಮಂಜೂರಾತಿ ನೀಡಿದ್ದು, ಮೂರು ವರ್ಷ ಯಶಸ್ವಿಯಾಗಿ ನಡೆಸಿ, ಆ ಬಳಿಕ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಪ್ರೌಢ ಶಾಲೆ ನಿರ್ವಹಣೆ, ಶಿಕ್ಷಕರ ವೇತನ ಸಹಿತ ಶಾಲೆ ಮುನ್ನಡೆಯಲು ಎಷ್ಟೇ ಖರ್ಚು ಬಂದರೂ ನೋಡಿಕೊಳ್ಳುವೆ. ಈ ಶಾಲೆ ಮಾತ್ರ, ಇಡೀ ತಾಲೂಕಿಗೆ ಮಾದರಿಯಾಗಬೇಕು ಎಂದು ಶಾಸಕ ಎಚ್.ವೈ.ಮೇಟಿ ಆಶಿಸಿದರು.

ತಾಯಿಯ ಹೆಸರಿನಲ್ಲಿ 2 ಎಕರೆ ಭೂದಾನ:

ತಿಮ್ಮಾಪುರ ಗ್ರಾಮಕ್ಕೆ ಬಿಸಿಎಂ ವಸತಿ ನಿಲಯ ಬೇಡಿಕೆ ಇದೆ. ಅದಕ್ಕೂ ಈ ಬಾರಿ ಗಂಭೀರ ಪ್ರಯತ್ನ ಮಾಡುವೆ. ಜಾಗದ ಕೊರತೆ ಎದುರಾಗುತ್ತಿದ್ದು, ಗ್ರಾಮಸ್ಥರು ಭೂಮಿ ನೀಡಲು ಸಹಕಾರ ನೀಡಬೇಕು. ಸರ್ಕಾರಿ ಪ್ರೌಢ ಶಾಲೆಗೆ ಶಾಶ್ವತ ಕಟ್ಟಡ, ಆಟದ ಮೈದಾನ, ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸಲು ಜಾಗದ ಕೊರತೆ ಇದೆ. ಹೀಗಾಗಿ ನನ್ನ ತಾಯಿ ಹೊಳೆಯವ್ವ ಮೇಟಿ ಹೆಸರಿನಲ್ಲಿ 2 ಎಕರೆ ಭೂಮಿ ದಾನವಾಗಿ ನೀಡುತ್ತೇನೆ ಎಂದು ವಾಗ್ದಾನ ನೀಡಿದರು.

ಶಕ್ತಿಯಾಗಿ ಬೆಳೆಯಲು ಹುಟ್ಟೂರು ಕಾರಣ:

ನಾನು ಹೆಚ್ಚುಶಾಲೆ ಕಲಿತಿಲ್ಲ. ಆದರೂ, 10 ಬಾರಿ ಚುನಾವಣೆ ಎದುರಿಸಿದ್ದೇನೆ. 2 ಬಾರಿ ಸಚಿವ, 5 ಬಾರಿ ಶಾಸಕ, 1 ಬಾರಿ ಸಂಸದನಾಗಿದ್ದೇನೆ. ನಾನು ರಾಜಕೀಯದಲ್ಲಿ ಇಷ್ಟೆಲ್ಲ ಬೆಳೆಯಲು ಹುಟ್ಟೂರಿನ ಜನರ ಸಹಾಯ, ಸಹಕಾರ, ಬೆಂಬಲ ಬಹಳಷ್ಟಿದೆ. ನನ್ನೂರಿನ ಅಭಿಮಾನ, ಹೆಮ್ಮೆ ನನಗೂ ಇದೆ. ಹುಟ್ಟಿದ ಊರಿನ ಬಗ್ಗೆ ಅಭಿಮಾನ, ಕಾಳಜಿ ಪ್ರತಿಯೊಬ್ಬರಿಗೂ ಇರಬೇಕು. ಇದನ್ನೇ ನನ್ನ ಮಕ್ಕಳು, ಮೊಕ್ಕಳಿಗೂ ನಾನು ಹೇಳಿದ್ದೇನೆ ಎಂದರು.

ಸಂಸದನಾದಾಗ ನೋವು ಅನುಭವಿಸಿದೆ:

ನಾನು ಸಚಿವನಾಗಿದ್ದ ವೇಳೆಯೇ ಲೋಕಸಭೆ ಚುನಾವಣೆಗೆ ನಿಲ್ಲಲು ದೇವೇಗೌಡರು ಒತ್ತಾಯಿಸಿದ್ದರು. ನನಗೆ ಹಿಂದಿ-ಇಂಗ್ಗಿಷ ಭಾಷೆ ಬರಲ್ಲ. ಬೇಡ ಎಂದು ಕೇಳಿಕೊಂಡಿದ್ದೆ. ಆದರೂ, ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿದರು. ಗೆದ್ದು ದಿಲ್ಲಿಗೆ ಹೋದಾಗ, ಭಾಷೆಯ ಸಮಸ್ಯೆ ಎದುರಿಸಿದೆ. ಆಗ ನಾನೂ ಹೆಚ್ಚು ಶಾಲೆ ಕಲಿಯಬೇಕಿತ್ತು ಎಂಬ ನೋವು ಆಯಿತು. ಇಂತಹ ನೋವು, ಈಗಿನ ಯಾವ ಮಕ್ಕಳಿಗೂ ಆಗಬಾರದು. ಸ್ಥಳೀಯವಾಗಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಹತ್ತಿರದ ರಾಂಪುರದಲ್ಲಿ ಪದವಿ ಪೂರ್ವ, ಪದವಿ ಶಿಕ್ಷಣ ನೀಡಲು ಕಾಲೇಜು ಎಲ್ಲವೂ ಸ್ಥಾಪಿಸಲಾಗಿದೆ. ಗ್ರಾಮದ ಕೆರೆಯ ಸಮಗ್ರ ಅಭಿವೃದ್ಧಿಗೂ ಯೋಜನೆ ರೂಪಿಸುತ್ತಿದ್ದು, ನಮ್ಮೂರು ಹಾಗೂ ಬಾಗಲಕೋಟೆ ಕ್ಷೇತ್ರವನ್ನು ಮಾದರಿ ಮಾಡಲು ಪ್ರಯತ್ನಿಸುವೆ ಎಂದು ಶಾಸಕರು ತಿಳಿಸಿದರು.

ಗ್ರಾಪಂ ಅಧ್ಯಕ್ಷ ರಮೇಶ ಕೊಳ್ಳಾರ, ಜಿಪಂ ಮಾಜಿ ಅಧ್ಯಕ್ಷರಾದ ಬಾಯಕ್ಕ ಮೇಟಿ, ಬಸವಂತಪ್ಪ ಮೇಟಿ, ಪಿಕೆಪಿಎಸ್‌ ಅಧ್ಯಕ್ಷ ಮುತ್ತಪ್ಪ ಹುಗ್ಗಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಜೀತ ಮನ್ನಿಕೇರಿ, ಬಿಇಒ ಎಂ.ಎಸ್.ಬಡದಾನಿ, ಗ್ರಾಪಂ ಉಪಾಧ್ಯಕ್ಷೆ ಯಲ್ಲವ್ವ ಪರಶುರಾಮ ಮಸಬಿನಾಳ, ಪಿಡಿಒ ಅರ್ಚನಾ ಕುಲಕರ್ಣಿ, ಪ್ರಮುಖರಾದ ಉಮೇಶ ಮೇಟಿ, ಎಚ್.ಕೆ.ಗುಡೂರ, ಎಸ್.ಜಿ.ಮಿರ್ಜಿ, ವೈ.ವೈ.ತಿಮ್ಮಾಪುರ, ಧರ್ಮೇಶ ತುಂಬುರಮಟ್ಟಿ, ನಾಗರಾಜ ದೇಶಪಾಂಡೆ, ಹಸನಡೋಂಗ್ರಿ ಮೆಟಗುಡ್ಡ, ಎಚ್.ಎಂ.ಪಾಟೀಲ, ಪ್ರಕಾಶ ಕೋಟಿ, ಜಿ.ಜಿ.ಮಾಗನೂರ, ಪಿ.ಎಸ್.ಚವ್ಹಾಣ, ಎಸ್.ಎಸ್.ಬೆಣ್ಣೂರ, ಪ್ರಶಾಂತ ಸವದಿ, ವಿಠ್ಠಲ ವಾಲಿಕಾರ ಮುಂತಾದವರು ಇದ್ದರು.

1962ರಲ್ಲಿ ನಮ್ಮ ತಂದೆ ಯಮನಪ್ಪ ಅವರು, ಆಗಿನ ಕಾಲದಲ್ಲಿ ₹1501 ದೇಣಿಗೆ ನೀಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕಟ್ಟಿಸಿದ್ದರು. ಅದೇ ಶಾಲೆಯಲ್ಲಿ ನಾನೂ 4ನೇ ತರಗತಿ ವರೆಗೆ ಕಲಿತೆ. ಇಂದು ಅದೇ ಶಾಲಯನ್ನು ಪ್ರೌಢ ಶಾಲೆಯನ್ನಾಗಿ ಉನ್ನತ್ತೀಕರಿಸಿದ್ದು, ಮೂರು ವರ್ಷ ಸ್ವಂತ ಹಣದಲ್ಲಿ ನಿರ್ವಹಣೆ ಮಾಡುತ್ತೇನೆ. ತಿಮ್ಮಾಪುರಕ್ಕೆ ಬಿಸಿಎಂ ವಸತಿ ನಿಲಯ ತರಲು ಪ್ರಯತ್ನಿಸುವೆ ಎಂದು ಶಾಸಕ ಎಚ್.ವೈ.ಮೇಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಬದಲು ಕುರಿತು ಹೇಳಿಕೆ : ಯತೀಂದ್ರಗೆ ಸಿಎಂ ಸಿದ್ದು ಕ್ಲಾಸ್‌?
1.24 ಕೋಟಿ ಗೃಹ ಲಕ್ಷ್ಮಿಯರಿಗೆ ₹ 1.54 ಕೋಟಿ : ಲಕ್ಷ್ಮೀ ಹೆಬಾಳ್ಕರ್