ರಾಜ್ಯವನ್ನು ನೇಪಾಳದ ಪರಿಸ್ಥಿತಿಗೆ ದೂಡಬೇಡಿ

KannadaprabhaNewsNetwork |  
Published : Mar 03, 2026, 01:15 AM IST
ಯುವಕರಿಗೆ ಕೆಲಸ ಕೊಡಿ: ರಾಜ್ಯವನ್ನು ನೇಪಾಳದ ಪರಿಸ್ಥಿತಿಗೆ ದೂಡಬೇಡಿ | Kannada Prabha

ಸಾರಾಂಶ

ರಾಜ್ಯವನ್ನು ನೇಪಾಳದ ಪರಿಸ್ಥಿತಿಗೆ ದೂಡಬೇಡಿ ಎಂದು ರಾಜ್ಯ ಯುವಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಎಚ್ಚರಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಎರಡೂವರೆ ವರ್ಷದಲ್ಲಿ ಯಾವುದೆ ಹುದ್ದೆಗಳನ್ನು ಭರ್ತಿ ಮಾಡಿಲ್ಲದಿರುವುದರಿಂದ ನಿರುದ್ಯೋಗಿ ಯುವಕರು ಧಾರವಾಡದಲ್ಲಿ ಬೀದಿಗಿಳಿದರು. ಯುವಕರು, ರೈತರು, ಮಧ್ಯಮ ವರ್ಗದವರ ತಾಳ್ಮೆ ಪರೀಕ್ಷೆ ಮಾಡಬೇಡಿ. ರಾಜ್ಯವನ್ನು ನೇಪಾಳದ ಪರಿಸ್ಥಿತಿಗೆ ದೂಡಬೇಡಿ ಎಂದು ರಾಜ್ಯ ಯುವಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಎಚ್ಚರಿಸಿದರು.

ನಗರದ ಕಂಚಾಘಟ್ಟ ರಸ್ತೆಯ ಜಿ.ಕೆ.ಬಾಬು ಲೇಔಟ್‌ನಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಸ್ವತಃ ಟ್ವೀಟ್ ಮಾಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ತಂದೆ ತಾಯಿ ಮಕ್ಕಳನ್ನು ಓದಿಸಿ ಬೆಳೆಸಿರುತ್ತಾರೆ. ಸ್ವಾಭಿಮಾನಿ ಯುವಕರ ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದರು.ನಮ್ಮ ರಾಜ್ಯ ಸಂಪದ್ಬರಿತವಾಗಿದೆ. ರಾಜ್ಯದ ತೆರಿಗೆ ಹಣದಿಂದ ಉತ್ತಮವಾಗಿ ಕೆಲಸ ಮಾಡಬಹುದು. ಸರ್ಕಾರ ನಡೆಸುತ್ತಿರುವವರಿಗೆ ಜನಪರ ಕಾಳಜಿ ಇಲ್ಲ. ರಾಜ್ಯ ಅಭಿವೃದ್ಧಿಪಡಿಸುವ ದೂರದೃಷ್ಠಿ, ಕಲ್ಪನೆ, ಬದ್ಧತೆ ಹಾಗೂ ಚಿಂತನೆ ಯಾವುದೂ ಇಲ್ಲ. ಕೇವಲ ಭ್ರಷ್ಟಾಚಾರದ ಮನಸ್ಥಿತಿ ಇದೆ. ಹಾಗಾಗಿ ಕರ್ನಾಟಕ ರಾಜ್ಯ ಸೊರಗಿಹೋಗುತ್ತಿದೆ. ೩ವರ್ಷಗಳಲ್ಲಿ ೨೮೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀದರ್, ಯಾದಗಿರಿ, ಕಲ್ಬುರ್ಗಿಯಲ್ಲಿ ಅತಿವೃಷ್ಠಿಯಾಯಿತು. ಬೆಳೆ ನಾಶವಾಯಿತು. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದರು. ೨-೩ತಿಂಗಳ ಭಾಗ್ಯಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಹೋಗಿಲ್ಲ. ಎಸ್ಸಿಎಸ್ಟಿ ನಿಗಮದ ಹಣವನ್ನು ಗ್ಯಾರೆಂಟಿಗೆ ಬಳಸಿಕೊಳ್ಳಲಾಗುತ್ತಿದೆ. ಈಗ ಕೇವಲ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಗ್ಯಾರೆಂಟಿ ಕೊಡಬೇಕೆಂದು ಸಚಿವ ಎಂ.ಬಿ.ಪಾಟೀಲ್ ಕೇಳುತ್ತಿದ್ದಾರೆ. ಕಾಂಗ್ರೆಸ್ ಕೇಂದ್ರ ಮುಖಂಡರೂ ಗ್ಯಾರೆಂಟಿಯಿಂದಾಗಿ ರಾಜ್ಯಸರಕಾರಕ್ಕೆ ಒತ್ತಡವಾಗಿದೆ. ಗ್ಯಾರೆಂಟಿ ಘೋಷಿಸಬಾರದಿತ್ತು ಎನ್ನುತ್ತಾರೆ. ಅಭಿವೃದ್ದಿಗೆ ಹಣ ಇಲ್ಲ ಎನ್ನುತ್ತಾರೆ. ಗ್ಯಾರೆಂಟಿಗಳನ್ನು ಘೋಷಿಸುವಾಗ ಇದೆಲ್ಲಾ ನೆನಪಿರಲಿಲ್ಲವಾ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.

ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ ತಮಿಳುನಾಡು, ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಪ್ರಾದೇಶಿಕ ಪಕ್ಷವನ್ನು ಕಟ್ಟಿದವರು ಎಚ್.ಡಿ.ದೇವೇಗೌಡ. ಅದಕ್ಕೆ ಜೀವ ತುಂಬಿದ್ದು ಕುಮಾರಸ್ವಾಮಿಯಾದರೆ ಈಗ ಬಾಹುಬಲಿ ರೀತಿ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಂತಹ ಪ್ರದೇಶಿಕ ಪಕ್ಷಕ್ಕೆ ೨೫ವರ್ಷಗಳು ತುಂಬಿದ್ದು ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಚಿ.ನಾ.ಹಳ್ಳಿ ಶಾಸಕ ಸುರೇಶ್‌ಬಾಬು, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿದರು. ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ನಿಂಗಪ್ಪ, ಮಾಜಿ ಜಿಲ್ಲಾಧ್ಯಕ್ಷ ಆಂಜಿನಪ್ಪ, ಪಾವಗಡ ಮಾಜಿ ಶಾಸಕ ತಿಮ್ಮ್ಮರಾಯಪ್ಪ, ಕುಣಿಗಲ್‌ನ ರವಿನಾಗರಾಜಯ್ಯ, ಶಿರಾದ ಉಗ್ರೇಶ್, ಜೆಡಿಎಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವಸ್ವಾಮಿ, ನಗರಾಧ್ಯಕ್ಷ ರಾಜು ಕಂಚಾಘಟ್ಟ, ಮಾಜಿ ನಗರಸಭೆ ಸದಸ್ಯೆ ರೇಖ ಅನೂಪ್, ಮುಖಂಡರಾದ ಸುಮಿತ್ರ, ಸಂತೋಷ್, ಸುದರ್ಶನ್, ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಗೆ 50 ಸಾವಿರ ಕೋಟಿ ಮೀಸಲಿಡಲು ಪ್ರತಿಭಟನೆ
ಪೌರ ಕಾರ್ಮಿಕರನ್ನು ಭರ್ತಿ ಮಾಡಲು ಸೂಚನೆ