ಸವಣೂರು: ಎಸ್‌ಸಿಪಿ ಮತ್ತು ಟಿಎಸ್‌ಪಿ ಶೇ. 24.10ರಷ್ಟು ಈ ಹಣವನ್ನು ಎಸ್‌ಸಿ ಮತ್ತ ಎಸ್‌ಟಿ ಕಾಲನಿಗಳ ಅಭಿವೃದ್ಧಿಗೆ ಮೀಸಲಿಡಬೇಕು. ಈ ಹಣದಲ್ಲಿ ಯಾವುದೇ ರೀತಿಯಾಗಿ ಪೌರಕಾರ್ಮಿಕರಿಗೆ ಹಾಗೂ ಎಸ್‌ಸಿ ಮಕ್ಕಳಿಗೆ ಖರ್ಚು ಮಾಡುವುದು ಕಾನೂನುಬಾಹಿರವಾಗಿದೆ ಎಂದು ನಾಮನಿರ್ದೇಶನ ಸದಸ್ಯ ಲಕ್ಷ್ಮಣ ಕನವಳ್ಳಿ ಅವರು ಆರೋಪಿಸಿದರು.ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಬೇರೆ ಯಾವುದೇ ಕೆಲಸ ಕಾರ್ಯಗಳಿಗೆ ವಿನಿಯೋಗಿಸದೆ ಎಸ್‌ಸಿ ಮತ್ತು ಎಸ್‌ಟಿ ಕಾಲನಿ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಉಪಯೋಗಿಸಬೇಕು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕಾಮಗಾರಿಗಳಿಗೆ ಬಳಕೆ ಮಾಡಿದರೆ ಕಾನೂನುಬಾಹಿರವಾಗುತ್ತದೆ. ಇದು ನಿಮ್ಮ ಗಮನಕ್ಕೆ ಇರಲಿ ಎಂದು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು.
ಪೌರಕಾರ್ಮಿಕ ಮಕ್ಕಳಿಗೆ ಸಹಾಯಧನ, ಲ್ಯಾಪ್ ಟಾಪ್ ಹಾಗೂ ಬಟ್ಟೆ, ಟಿಫಿನ್ ಇತ್ಯಾದಿಗಳಿಗೆ ಸಾಮಾನ್ಯ ನಿಧಿಯಲ್ಲಿ ಶೇ. 5ರಷ್ಟು ಹಣವನ್ನು ಇಂತಹ ಮಕ್ಕಳಿಗೆ ವಿನಿಯೋಗಿಸಿಕೊಳಬೇಕು ಎಂದರು. ಪುರಸಭೆಯ ಮಳಿಗೆಗಳ ಹರಾಜುಗಳು ಮುಗಿದು ಬಹುದಿನಗಳು ಕಳೆದರೂ ಇಂದಿನವರಿಗೂ ಟೆಂಡರ್ ಕರೆಯದೇ ಯಾಕೆ ತಡೆಹಿಡಿದ್ದಿದಿರಿ ಎಂದು ಮತ್ತೆ ಗರಂ ಆದ ಕನವಳ್ಳಿ ಅವರು, ಪುರಸಭೆಗೆ ಆದಾಯವನ್ನು ದ್ವಿಗುಣ ಮಾಡುವ ಮಳಿಗೆಗಳನ್ನು ಹರಾಜು ಮಾಡದೇ ಮೀನಮೇಷ ಮಾಡುತ್ತಿದ್ದಿರಿ. ಈ ಹಿಂದೆ ಮಳಿಗೆಗಳನ್ನು ಟೆಂಡರ್ ಪಡೆದು ಬೇರೆ ವ್ಯಕ್ತಿಗಳಿಗೆ ಸಾವಿರಗಟ್ಟಲೆ ಬಾಡಿಗೆ ನೀಡಿದ್ದಾರೆ. ಕೂಡಲೇ ಹರಾಜು ಪ್ರಕ್ರಿಯ ಮಾಡಬೇಕು ಎಂದು ಒತ್ತಾಯಿಸಿದರು. ವಿಶೇಷ ಸಾಮಾನ್ಯ ಸಭೆಯಲ್ಲಿ 2025- 26ನೇ ಸಾಲಿನ ಆಸ್ತಿ ತೆರಿಗೆಯನ್ನು ಶೇ. 3ರಷ್ಟು ಹೆಚ್ಚಿಗೆ ಮಾಡಲು ಸರ್ವ ಸದಸ್ಯರಿಂದ ಅನುಮತಿಯನ್ನು ಪಡೆಯಲಾಯಿತು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ವ್ಯವಸ್ಥಾಪಕ ಎಂ.ಬಿ. ದೊಡ್ಡಣ್ಣವರ, ಅಧ್ಯಕ್ಷ ಅಲ್ಲಾವುದೀನ ಮನಿಯಾರ, ಉಪಾಧ್ಯಕ್ಷೆ ಖಮರುನೀಸಾ ಪಟೇಲ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕಲ್ಮಠ, ಸದಸ್ಯರಾದ ಪೀರಹ್ಮದ ಗವಾರಿ, ಸದಾ ಕೆಮ್ಮಣ್ಣಕೇರಿ, ಮಹೇಶ ಮುದಗಲ್, ಶೈಲಾ ಮುದಿಗೌಡ್ರ, ಅಜಿಂ ಮಿರ್ಜಾ, ಅತ್ತಾವುಲ್ಲಾಖಾನ ಪಠಾಣ, ಮಹದೇವಪ್ಪ ಮಹೇಂದ್ರಕರ, ರೇಖಾ ಬಂಕಾಪುರ, ಪರಹೀನ ಚಂದುಬಾಯಿ, ದುರ್ಗಪ್ಪ ಗಡೇದ ಹಾಗೂ ಇತರರು ಇದ್ದರು.ಭಗೀರಥ ಉಪ್ಪಾರ ಸಮಾಜದಿಂದ ವಿಶ್ವ ಜಲ ದಿನಾಚರಣೆಬ್ಯಾಡಗಿ: ಭಗೀರಥ ಉಪ್ಪಾರ ಸಮಾಜದ ವತಿಯಿಂದ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ಗಿಡಗಳಿಗೆ ನೀರು ಉಣಿಸುವುದರ ಮೂಲಕ ವಿಶ್ವ ಜಲ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಸಮಾಜದ ಅಧ್ಯಕ್ಷ ಮಂಜುನಾಥ ಉಪ್ಪಾರ, ಜಗತ್ತಿನಲ್ಲಿ ಮನುಷ್ಯನ ಆಧುನಿಕತೆ ಭರಾಟೆ ಮತ್ತು ಕರಾಳತೆಗೆ ಸಿಲುಕಿ ಅರಣ್ಯ ನಾಶವಾಗುತ್ತ ಸಾಗಿದೆ. ಇದರಿಂದ ಕೇಪ್‌ಟೌನ್ ಸೇರಿದಂತೆ ಹಲವು ನಗರಗಳಲ್ಲಿ ನೀರು ಮಾಯವಾಗಿದೆ. ಅರಣ್ಯ ಸಂಪತ್ತು ಇದ್ದಲ್ಲಿ ಮಾತ್ರ ಮಳೆ ಬೆಳೆ ಸಾಧ್ಯ, ಆದರೆ ಮನುಷ್ಯ ಇದನ್ನು ಅರ್ಥ ಮಾಡಿಕೊಳ್ಳದೇ ತನ್ನ ಅಂತ್ಯಕ್ಕೆ ತಾನೇ ಮುನ್ನುಡಿ ಬರೆದುಕೊಳ್ಳುತ್ತಿದ್ದಾನೆ ಎಂದರು.ಲಿಂಗರಾಜ ಹರ್ಲಾಪುರ ಮಾತನಾಡಿ, ಕಳೆದ ಐದಾರು ವರ್ಷಗಳಲ್ಲಿ ಭೂಮಿಯ ತಾಪಮಾನ ಹೆಚ್ಚುತ್ತಲೇ ಸಾಗಿದೆ. ಇದಕ್ಕೆ ಕಡಿವಾಣ ಹಾಕಬೇಕದಾದಲ್ಲಿ ಗಿಡ- ಮರಗಳು ಹಾಗೂ ಅರಣ್ಯ ಬೆಳೆಸುವುದು ಅತ್ಯವಶ್ಯವಾಗಿದೆ. ಪ್ರಕೃತಿ ಸಮತೋಲನಕ್ಕೆ ಗಿಡಮರಗಳು ಅತ್ಯವಶ್ಯ. ಈ ನಿಟ್ಟಿನಲ್ಲಿ ಬಿರು ಬೇಸಿಗೆಯಲ್ಲಿ ಗಿಡಗಳನ್ನು ಉಳಿಸಿ ಬೆಳೆಸುವುದು ಅತಿ ಮುಖ್ಯ ಎಂದರು.ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪುಟ್ಟರಾಜು, ಡಾ. ನಾಗರಾಜ, ಡಾ. ಸುರೇಶ ಗುಂಡಪಲ್ಲಿ, ಶಿವಬಸಪ್ಪ ಉಪ್ಪಾರ, ಶಂಕರ ಉಪ್ಪಾರ, ಚಂದ್ರು ರೋಣದ, ಕೃಷ್ಣಪ್ಪ ಉಪ್ಪಾರ, ಜಗದೀಶ ಉಪ್ಪಾರ ಸೇರಿ ಹಲವರು ಉಪಸ್ಥಿತರಿದ್ದರು.