ಬ್ಯಾಡಗಿಯ ಮೆಣಸಿನಕಾಯಿ ಮಾರ್ಕೆಟ್‌ನಲ್ಲಿ ಸ್ವಚ್ಛತೆಗೆ ನೀಡಿ: ಶಿವಾನಂದ ಕಾಪಸಿ

KannadaprabhaNewsNetwork | Published : Feb 28, 2025 12:45 AM

ಸಾರಾಂಶ

ಮೆಣಸಿನಕಾಯಿ ಹೆಸರು ಅಂತಾರಾಷ್ಟ್ರೀಯ ಮಟ್ಟ ತಲುಪಿದಂತೆ ಶುಚಿತ್ವಕ್ಕೂ ಮಾರುಕಟ್ಟೆ ಹೆಸರು ತಲುಪಬೇಕು.

ಬ್ಯಾಡಗಿ: ಪಟ್ಟಣದ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ರಾಜ್ಯ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಶಿವಾನಂದ ಕಾಪಸಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲ ಅಂಗಡಿಗಳಿಗೆ ತೆರಳಿ ನಿಯಮದಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆಯೇ? ಇಲ್ಲವೇ ತೂಕದಲ್ಲಿ ರೈತರ ನಂಬಿಕೆಗಳನ್ನು ಉಳಿಸಿಕೊಳ್ಳುವ ಕೆಲಸವಾಗುತ್ತಿದೆಯೇ ಇಲ್ಲವೇ ಇನ್ನಿತರ ಮಾಹಿತಿಗಳನ್ನು ಗುಪ್ತವಾಗಿ ಪ್ರವೇಶ ಮಾಡುವ ಮೂಲಕ ಪರಿಶೀಲನೆ ನಡೆಸಿದರು.ಬಣ್ಣದ ಬದಲು ಡಿಜಿಟಲ್ ಸ್ಟಿಕರ್‌ಗೆ ಚಿಂತನೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲದ ಮೇಲೆ ಅಂಗಡಿಗಳ ಹೆಸರು, ಲಾಟ್ ನಂಬರ್ ಮತ್ತು ತೂಕಕ್ಕಾಗಿ ವಿಷಯುಕ್ತ ಹಸಿರು ಬಣ್ಣ ಬಳಸಲಾಗುತ್ತಿದೆ. ಅದರಿಂದ ಮೆಣಸಿನಕಾಯಿ ಮೇಲೆ ಬಣ್ಣವು ಬೀಳುತ್ತಿದ್ದು, ಅದರ ಬದಲಾಗಿ ಪ್ರತಿ ಚೀಲಕ್ಕೂ ಡಿಜಿಟಲ್ ಸ್ಟಿಕರ್ ಬಳಕೆ ಮಾಡಿದಲ್ಲಿ ಅದರಲ್ಲಿ ಅಂಗಡಿ ಹೆಸರು ಲಾಟ್ ನಂಬರ್ ಮತ್ತು ತೂಕ ಸಿಗಲಿದೆ ಎಂದರು.

ಮೆಣಸಿನಕಾಯಿ ವಸ್ತು ಆಹಾರ ರೂಪದಲ್ಲಿ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಹೀಗಾಗಿ ಎಪಿಎಂಸಿ ಆವರಣದಲ್ಲಿ ಮೊದಲ ಆದ್ಯತೆಯನ್ನು ನೀಡಬೇಕು. ಇದಕ್ಕಾಗಿ ಎಷ್ಟೇ ಹಣ ವ್ಯಯವಾದರೂ ಪರವಾಗಿಲ್ಲ, ಮೆಣಸಿನಕಾಯಿ ಹೆಸರು ಅಂತಾರಾಷ್ಟ್ರೀಯ ಮಟ್ಟ ತಲುಪಿದಂತೆ ಶುಚಿತ್ವಕ್ಕೂ ಮಾರುಕಟ್ಟೆ ಹೆಸರು ತಲುಪಬೇಕು. ವಸ್ತುವು ಹೈಜಿನಿಕ್ ಆಗಿದ್ದಲ್ಲಿ ಅದರಿಂದ ಇನ್ನಷ್ಟು ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಸಾಧ್ಯವಿದೆ ಎಂದರು.

ಕಠಿಣ ಕ್ರಮ: ರೈತರು, ವ್ಯಾಪಾರಸ್ಥರು, ದಲಾಲರು, ಕೂಲಿ ಕಾರ್ಮಿಕರ ನೂರಾರು ವರ್ಷಗಳ ಪರಿಶ್ರಮದಿಂದ ಮಾರುಕಟ್ಟೆ ಅಭಿವೃದ್ಧಿಯಾಗಿದ್ದು, ಬೃಹತ್ ಉದ್ಯಮವಾಗಿ ಹೊರಹೊಮ್ಮಿದೆ. ಶೇ. 98ರಷ್ಟು ವಹಿವಾಟು ಅಧಿಕೃತವಾಗಿ ನಡೆಯುತ್ತಿದ್ದು, ಸರ್ಕಾರಕ್ಕೂ ಅದಾಯದ ಕೇಂದ್ರಬಿಂದುವಾಗಿದೆ. ಹೀಗಾಗಿ ಸದರಿ ಮಾರುಕಟ್ಟೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕಾಗಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಸೇರಿದಂತೆ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ವರ್ತಕ ಚನ್ನಬಸಪ್ಪ ಹುಲ್ಲತ್ತಿ ಮಾತನಾಡಿ, ಪಟ್ಟಣದಲ್ಲಿ ಸುಮಾರು 35ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್‌ಗಳಿವೆ. ಆದರೆ ಅವುಗಳಿಗೆ ಪ್ರತಿವರ್ಷ ಲೈಸೆನ್ಸ್ ನವೀಕರಣ ಮಾಡುವಂತೆ ತಿಳಿಸಲಾಗುತ್ತಿದ್ದು, ಈಗಿರುವ ವರ್ತಕರ ಲೈಸೆನ್ಸ್ ಮಾದರಿಯಲ್ಲಿ ಅವುಗಳನ್ನೂ ಪ್ರತಿ 10 ವರ್ಷಕ್ಕೆ ನವೀಕರಣ ಮಾಡಲು ನಿಯಮದಲ್ಲಿ ತಿದ್ದುಪಡಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಎಸ್.ಜಿ. ನ್ಯಾಮಗೌಡ್ರ, ವರ್ತಕರಾದ ನಾಗರಾಜ ಸದಾರಾಧ್ಯಮಠ ಸೇರಿದಂತೆ ಎಪಿಎಂಸಿ ಸಿಬ್ಬಂದಿಗಳಾದ ಬಿ.ಎಸ್. ಗೌಡರ ವಿಜಯ ಗೂರಪ್ಪನವರ, ಎನ್.ಎಂ. ಪೋಟೇರ ಇತರರಿದ್ದರು.

Share this article