ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಜಾರಿಗೆ ತರಲೇಬೇಕೆಂಬ ದೃಢ ಸಂಕಲ್ಪ ಮಾಡಿದ್ದಾರೆ. ಮೋದಿ ಅವರು ಮುಂದಿಟ್ಟು ಹೆಜ್ಜೆ ಎಂದೂ ಹಿಂದೆ ಇಟ್ಟ ಉದಾಹರಣೆಯೇ ಇಲ್ಲ. ಮಹಿಳಾ ಮೀಸಲಾತಿ ಜಾರಿಗೆ ತಂದೇ ತರುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಹುಬ್ಬಳ್ಳಿ:
ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ ಎಂದು ಧೃತಿಗೆಡಬೇಡಿ. ಈ ಮಸೂದೆ ಇದೇ ಅವಧಿಯಲ್ಲಿ ಜಾರಿಗೆ ಬರುತ್ತೆ. ಮುಂದಿಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ. ಮಹಿಳಾ ಮೀಸಲಾತಿ ಜಾರಿಗೆ ತರುವುದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ!
ಇಲ್ಲಿನ ನೆಹರು ಮೈದಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧಿಸಿ ಸೋಲುವಂತೆ ಮಾಡಿದ ಕಾಂಗ್ರೆಸ್ ವಿರುದ್ಧ ಆಯೋಜಿಸಿದ್ದ ಜನಾಕ್ರೋಶ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ ಪರಿ.
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಜಾರಿಗೆ ತರಲೇಬೇಕೆಂಬ ದೃಢ ಸಂಕಲ್ಪ ಮಾಡಿದ್ದಾರೆ. ಮೋದಿ ಅವರು ಮುಂದಿಟ್ಟು ಹೆಜ್ಜೆ ಎಂದೂ ಹಿಂದೆ ಇಟ್ಟ ಉದಾಹರಣೆಯೇ ಇಲ್ಲ. ಮಹಿಳಾ ಮೀಸಲಾತಿ ಜಾರಿಗೆ ತಂದೇ ತರುತ್ತಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಮಹಿಳಾ ಮೀಸಲಾತಿ ಜಾರಿಗೊಳಿಸುವುದನ್ನು ತಡೆಯುವ ಶಕ್ತಿ ಕಾಂಗ್ರೆಸ್ ಅಲ್ಲ. ಯಾರಿಗೂ ಇಲ್ಲ ಎಂದರು.
ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಬೇಕಾದರೆ, ನಾರಿಶಕ್ತಿ ಪಾತ್ರ ದೊಡ್ಡದು ಎಂದು ಮೋದಿ ಅವರು ಬಲವಾಗಿ ನಂಬಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಬಯಕೆ ಹೊಂದಿದ್ದರು. ಆದರೆ, ಕಾಂಗ್ರೆಸ್ ಆ ಮಸೂದೆಯನ್ನು ಸೋಲಿಸುವ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಈ ಹಿಂದೆ ಆರ್ಟಿಕಲ್ 370 ರದ್ದತಿ, ಒನ್ ನೇಷನ್, ಒನ್ ಎಲೆಕ್ಷನ್‌ಗೂ ಕಾಂಗ್ರೆಸ್ ವಿರೋಧ ಮಾಡಿತ್ತು. ಇದೀಗ ಮಹಿಳಾ ಮೀಸಲಾತಿಗೆ ವಿರೋಧಿಸಿದೆ. ಒಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ. ಇಂತಹ ಕಾಂಗ್ರೆಸ್‌ಗೆ ರಾಜ್ಯದ ಮಹಿಳೆಯರು ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು.
ಸಬಲರಾಗುವುದು ಬೇಕಿಲ್ಲ:
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಮಹಿಳಾ ಮೀಸಲಾತಿ ಜಾರಿಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದರು. ಅಲ್ಲದೇ, ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರು ಸೇರಿದಂತೆ ದುರ್ಬಲರಿದ್ದವರು ಸಬಲರಾಗುವುದು ಕಾಂಗ್ರೆಸ್‌ಗೆ ಬೇಕಿಲ್ಲ. ಹಿಂದಿನಿಂದಲೂ ಒಬಿಸಿ, ಮಹಿಳಾ ಮೀಸಲಾತಿ, ತ್ರಿಬಲ್ ತಲಾಖ್, ಆರ್ಟಿಕಲ್ 370ನಂತಹ ಮಸೂದೆಗಳಿಗೆ ವಿರೋಧ ಮಾಡುತ್ತಲೇ ಬಂದಿದೆ ಎಂದರು.
ದೇವೇಗೌಡರು, ವಾಜಪೇಯಿ ಅವರು ಪ್ರಧಾನಿಗಳಾಗಿದ್ದಾಗ ಮಹಿಳಾ ಮೀಸಲಾತಿ ತರಲು ಪ್ರಯತ್ನಿಸಿದ್ದರು. ಆಗಲೂ ವಿರೋಧಿಸಿತ್ತು. ಯುಪಿಎ ಸರ್ಕಾರವಿದ್ದಾಗ ಮಹಿಳಾ ಮೀಸಲಾತಿ ತೆಗೆದುಕೊಂಡು ಬನ್ನಿ ಬಿಜೆಪಿ ಬೆಂಬಲಿಸುತ್ತದೆ ಎಂದರೂ ಆಗ ತರಲಿಲ್ಲ.
2027ರ ಜನಗಣತಿ ಪ್ರಕಾರ ಕ್ಷೇತ್ರ ಪುನರವಿಂಗಡಣೆ ಮಾಡಿದರೆ ಆ ದಕ್ಷಿಣ ಭಾರತದ ಕ್ಷೇತ್ರಗಳು ಕಡಿಮೆಯಾಗುತ್ತವೆ. ಅದಕ್ಕೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳೇ ಹೊಣೆ. ನಕಲಿ ಗಾಂಧಿ ಕುಟುಂಬದವರೇ ಅಧಿಕಾರದಲ್ಲಿರಬೇಕು ಎನ್ನುವ ಕಾಂಗ್ರೆಸ್ ಅನ್ನು ಕಸದ ಬುಟ್ಟಿಗೆ ಹಾಕುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.
ರಾಜಕೀಯ ಭ್ರೂಣಹತ್ಯೆ:
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ನವರು ಮಹಿಳಾ ಮೀಸಲಾತಿ ವಿರೋಧಿಸುವ ಮೂಲಕ ಮಹಿಳೆಯರ ರಾಜಕೀಯ ಶಕ್ತಿಗೆ ಭ್ರೂಣಹತ್ಯೆ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಯಾವುದೇ ಕೆಲಸ ಕೈಗೆತ್ತಿಕೊಂಡರೆ ಅದನ್ನು ಮಾಡಿಯೇ ಮಾಡುತ್ತಾರೆ. 2029ಕ್ಕೆ ಮಹಿಳಾ ಮೀಸಲಾತಿ ಜಾರಿಗೆ ತಂದೆ ತರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಬಿಜೆಪಿ ಅಧ್ಯಕ್ಷೆ ಸಿ.ಮಂಜುಳಾ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಶಾಸಕಿಯರಾದ ರೂಪಾಲಿ ನಾಯ್ಕ, ಸೀಮಾ ಮಸೂತಿ, ಶಾಸಕರಾದ ಸಿ.ಸಿ.ಪಾಟೀಲ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನಾಗರಾಜ ಛಬ್ಬಿ, ಅಮೃತ್ ದೇಸಾಯಿ, ಅಶೋಕ ಕಾಟವೆ, ಮೇಯರ್ ಜ್ಯೋತಿ ಪಾಟೀಲ, ಡಾ. ಶೋಭಾ ನಿಸ್ಸೀಮಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ, ಹೇಮಲತಾ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.