- ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಜತೆ ಡಾ.ಪ್ರಭಾ ಸಮಾಲೋಚನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಬಹುಕಾಲದ ರೈಲ್ವೆ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿ ಪ್ರಮುಖ ನಾಲ್ಕು ಬೇಡಿಕೆಗಳಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.ಮಾಯಕೊಂಡ ರೈಲ್ವೆ ನಿಲ್ದಾಣದಲ್ಲಿ ಸಿದ್ಧಗಂಗಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಕಲ್ಪಿಸಬೇಕು, ಹರಿಹರ–ಚಿತ್ರದುರ್ಗ ಪ್ರಯಾಣಿಕ ರೈಲು ಸೇವೆಯನ್ನು ಪುನರಾರಂಭಿಸಬೇಕು ಹಾಗೂ ಮಾಯಕೊಂಡ ಹೋಬಳಿಯ ಹನುಮನಹಳ್ಳಿ ಗ್ರಾಮದ ರೈಲ್ವೆ ಗೇಟ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆ, ಶೌಚಾಲಯ, ಆಸನ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಸಾರ್ವಜನಿಕ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಇದಲ್ಲದೇ, ಬೆಂಗಳೂರು– ಹುಬ್ಬಳ್ಳಿ– ಮಿರಜ್– ಅಮೃತಸರ– ವೈಷ್ಣೋದೇವಿ ಕತ್ರಾ ಮಾರ್ಗವಾಗಿ ಕರ್ನಾಟಕದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ದೂರ ಪ್ರಯಾಣದ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಬೇಕು. ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಜ್ಯೋತಿರ್ಲಿಂಗ ಕ್ಷೇತ್ರಕ್ಕೆ ತೆರಳುವ ದಾವಣಗೆರೆ ಲೋಕಸಭಾ ಕ್ಷೇತ್ರದ ಜನರು ಸೇರಿದಂತೆ ಸಾವಿರಾರು ಭಕ್ತರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ, ಯಶವಂತಪುರ– ಶ್ರೀಶೈಲ ರೈಲು ಸೇವೆಯನ್ನು ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಮೂಲಕ ವಿಸ್ತರಿಸುವಂತೆ ಸಂಸದರು ಮನವಿ ಮಾಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಸಲ್ಲಿಸಿದ್ದಾರೆ.
- - --5ಕೆಡಿವಿಜಿ31:
ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಬಹುಕಾಲದ ರೈಲ್ವೆ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.