ಇದೇ ಸಮಯದಲ್ಲಿ ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ಅಂಬರೀಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದ ಘಟನೆ ಸಹ ನಡೆಯಿತು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸತತ ಮೂರು ಬಾರಿ ಗೆಲುವು ಸಾಧಿಸಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗುಡಿಬಂಡೆಯಲ್ಲಿ ಸುಬ್ಬಾರೆಡ್ಡಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಬೆಳಗ್ಗೆ ೬ ಗಂಟೆಯಿಂದ ಆರಂಭವಾದ ಬಂದ್ ಗೆ ಅಂಗಡಿ ಮಾಲೀಕರು ಸೇರಿದಂತೆ ಬಹುತೇಕರು ಬೆಂಬಲ ನೀಡಿದ್ದರು. ಸರ್ಕಾರಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ಸಾರಿಗೆ ಸಂಚಾರ ಬಂದ್ ಆಗಿತ್ತು.

ಪಟ್ಟಣದ ಮುಖ್ಯ ರಸ್ತೆಯನ್ನು ಬಂದ್ ಮಾಡುವ ಮೂಲಕ ಹಾಗೂ ಕಾಂಗ್ರೆಸ್ ನಾಯಕರು, ಸಿಎಂ, ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಸ್ಥಳೀಯ ಮುಖಂಡರು ಹೊರಹಾಕಿದರು.

ಇದೇ ಸಮಯದಲ್ಲಿ ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ಅಂಬರೀಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದ ಘಟನೆ ಸಹ ನಡೆಯಿತು.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಶ್ರಮಿಸಿದ ಶಾಸಕ ಸುಬ್ಬಾರೆಡ್ಡಿಯವರಿಗೆ ಇಂದು ಹೈಕಮಾಂಡ್ ಸಚಿವ ಸ್ಥಾನ ಕೊಟ್ಟಿಲ್ಲ. ಇದರಿಂದಾಗಿ ನಮಗೆ ತುಂಬಾನೆ ಬೇಸರವಾಗಿದೆ. ಸತತವಾಗಿ ಮೂರು ಬಾರಿ ಗೆಲ್ಲುವ ಮೂಲಕ ಬೇರೆ ಪಕ್ಷಗಳಿಗೆ ನಡುಕ ಹುಟ್ಟಿಸಿದ್ದಾರೆ. ಅಂತಹ ನಿಷ್ಠಾವಂತ ಶಾಸಕರಿಗೆ ಇಂದು ಸಚಿವ ಸ್ಥಾನ ನೀಡದೇ ಇರುವುದು ಸರಿಯಲ್ಲ. ಶಾಸಕ ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕರೆಯಲಾಗಿದ್ದ ಬಂದ್ ಗೆ ಗುಡಿಬಂಡೆಯಾದ್ಯಂತ ಉತ್ತಮ ಬೆಂಬಲ ದೊರೆಯಿತು. ಬಂದ್ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಬಳಿಕ ಮುಖಂಡ ಪ್ರಕಾಶ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಆಪರೇಷನ್ ಕಮಲ ನಡೆದ ಸಮಯದಲ್ಲಿ ಶಾಸಕ ಸುಬ್ಬಾರೆಡ್ಡಿಯವರಿಗೂ ಸಚಿವ ಸ್ಥಾನದ ಆಫರ್ ಬಂದಿತ್ತು. ಆದರೆ ತಾವು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರಿಂದ ಅವರು ಬಿಜೆಪಿ ಸೇರಲಿಲ್ಲ. ಸಚಿವ ಸ್ಥಾನದ ಆಸೆ ಅವರಿಗೆ ಇದಿದ್ದರೆ ಅಂದೇ ಅವರು ಬಿಜೆಪಿ ಸೇರಬಹುದಿತ್ತು. ತನ್ನ ಪಕ್ಷಕ್ಕೆ ಮೋಸ ಮಾಡದ ಪ್ರಾಮಾಣಿಕ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಯವರು ಎಂದರೆ ತಪ್ಪಾಗಲಾರದು. ಅಂತಹ ನಿಷ್ಠಾವಂತರಿಗೆ ಸಚಿವ ಸ್ಥಾನ ನೀಡದೇ ಇದ್ದರೆ ಹೇಗೆ, ಕೂಡಲೇ ಹೈಕಮಾಂಡ್ ಈ ಕುರಿತು ಚಿಂತನೆ ನಡೆಸಿ ಶಾಸಕ ಸುಬ್ಬಾರೆಡ್ಡಿಯವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಈ ವೇಳೆ ಕಾಂಗ್ರೇಸ್ ಮುಖಂಡರಾದ ರಘುನಾಥರೆಡ್ಡಿ, ಕೃಷ್ಣೇಗೌಡ, ಎಚ್.ಪಿ.ಲಕ್ಷ್ಮೀನಾರಾಯಣ, ನವೀನ್ ರಾಜ್, ವಿಕಾಸ್, ರಮೇಶ್, ಅಂಬರೀಶ್, ಬಾಲಕೃಷ್ಣಾರೆಡ್ಡಿ, ಲಕ್ಷ್ಮೀನಾರಾಯಣ, ನರೇಂದ್ರ, ಬಾಬು, ರಿಯಾಜ್, ರಮಣ, ಸುಬ್ಬರಾಯಪ್ಪ, ಆದಿನಾರಾಯಣಪ್ಪ, ರಾಜಾರೆಡ್ಡಿ, ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.