ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿದ್ದು, ಕೇವಲ ಶಾಲಾ ಪಠ್ಯದ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಮತ್ತು ಸ್ವಾಸ್ಥ್ಯ ಸಾಧ್ಯವಿಲ್ಲ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿದ್ದು, ಕೇವಲ ಶಾಲಾ ಪಠ್ಯದ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಮತ್ತು ಸ್ವಾಸ್ಥ್ಯ ಸಾಧ್ಯವಿಲ್ಲ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಅಭಿಪ್ರಾಯಪಟ್ಟರು.

ಬಸವನ ಬಾಗೇವಾಡಿ ತಾಲೂಕಿನ ಉತ್ನಾಳ ಗ್ರಾಮದಲ್ಲಿ ಜರುಗಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯದ್ವಾರ ಮತ್ತು ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಜೀವನೋಪಾಯಕ್ಕೆ ಆಧಾರವಾದರೆ ಸಂಸ್ಕಾರದ ಶಿಕ್ಷಣ ಸಮಾಜಮುಖಿ ಬದುಕಿಗೆ ನೆರವಾಗುತ್ತದೆ. ತಮ್ಮ ದುಡಿಮೆಯ ಹಣವನ್ನು ಖರ್ಚು ಮಾಡಿ ತಾವು ಕಲಿತ ಉತ್ನಾಳದ ಶಾಲೆಯ ಮುಖ್ಯದ್ವಾರ ನಿರ್ಮಾಣಕ್ಕೆ ನೆರವಾದ ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಚೇರಮನ್ ಬಸವರಾಜ ಕೌಲಗಿಯವರ ಕಾರ್ಯ ಅತ್ಯುತ್ತಮ ಎಂದು ಶ್ಲಾಘಿಸಿದರು.

ಬಾಲ ವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಇತ್ತೀಚೆಗೆ ನಿಧನರಾದ ನೀಲಮ್ಮ ಶಾಂತಪ್ಪ ಕೌಲಗಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಈ ಶಾಲೆಯ ಮುಖ್ಯದ್ವಾರ ನಿರ್ಮಾಣದ ರೂವಾರಿ ಬಸವರಾಜ ಕೌಲಗಿ ಅಂಥವರೂ ಕೂಡ ಉತ್ನಾಳದ ಈ ಪುಟ್ಟ ಊರಿನ ಸರ್ಕಾರಿ ಶಾಲೆಯಲ್ಲೇ ಓದಿದವರಾಗಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲಬುರ್ಗಿ ಮಾತನಾಡಿ, ಶಾಲೆಯ ಮುಖ್ಯದ್ವಾರ ನಿರ್ಮಾಣಕ್ಕೆ ನೆರವಾದ ಕೌಲಗಿ ಕುಟುಂಬದವರು ಸತ್ಕಾರ್ಯವನ್ನು ಶ್ಲಾಘಿಸಿದರು. ಶಿಕ್ಷಕ, ವಾಗ್ಮಿ ಅಶೋಕ ಹಂಚಲಿ, ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ರಾಜಶೇಖರ ಕೌಲಗಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಬಿ.ಬಾರೀಕಾಯಿ, ಶಿಕ್ಷಣ ಸಂಯೋಜಕ ಷಣ್ಮುಖ ಅಂಬಲಿ ಮಾತನಾಡಿದರು.

ಕೊಠಡಿ ಹಾಗೂ ಮುಖ್ಯದ್ವಾರ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ಶಾಸಕ ರಾಜುಗೌಡ ಪಾಟೀಲ ಹಾಗೂ ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಚೇರಮನ್ ಬಸವರಾಜ ಕೌಲಗಿ ಅವರನ್ನು ಶಾಲೆಯ ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಶಾಲಾ ಮುಖ್ಯ ಶಿಕ್ಷಕ ವೇದಮೂರ್ತಿ ಶ್ರೀ ಚಂದ್ರಶೇಖರಯ್ಯ ಹಿರೇಮಠ, ಉತ್ನಾಳ ಕೋರಿ ಮಠದ ಶ್ರೀ ಹಣಮಂತ ಮಹಾರಾಜ, ಲಕ್ಷಿದೇವಿ ಆರಾಧಕ ವೇ.ಮೂ. ಶ್ರೀ ಸಂಗಮೇಶ ಹೀರೆಮಠ, ಮಹಾಂತೇಶ ಹತ್ತರಕಿಹಾಳ, ಮುಖ್ಯ ಶಿಕ್ಷಕ ಬಿ.ಬಿ.ಬಾಗೇವಾಡಿ, ಸಹಶಿಕ್ಷಕರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಮುಖಂಡರು, ವಿದ್ಯಾರ್ಥಿಗಳು ಇದ್ದರು.