ಕೊಪ್ಪಳ: ನ್ಯಾಯಯುತ ಹೋರಾಟ ಮಾಡುವ ನಾವು ರಕ್ತ ನೀಡುತ್ತೇವೆಯೇ ಹೊರತು ಮೀಸಲಾತಿ ಬಿಡುವುದಿಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸ್ವಾಮೀಜಿಗಳು ಸುಮಾರು 750 ಕಿಮೀ ದೂರ ಪಾದಯಾತ್ರೆ ಮಾಡಿದರು. ಕಾರಣಾಂತರದಿಂದ ಮೀಸಲಾತಿ ಇನ್ನೂ ಸಿಕ್ಕಿಲ್ಲ. ಆದರೆ, ಈ ಹೋರಾಟ ಮುಂದುವರಿಯುತ್ತದೆ. ಕೇಂದ್ರದಿಂದ ಲಿಂಗಾಯತರಿಗೆ ಒಬಿಸಿ ಮೀಸಲಾತಿ ಪಡೆಯಲು ಎರಡೂ ಪೀಠದ ಸ್ವಾಮೀಜಿಗಳು, ಸಮಾಜದ ಮುಖಂಡರ ಸಭೆ ನಡೆಸಿ ನಿರ್ಧರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸಮಾಜದ ಹಿರಿಯರ ಸಭೆಯನ್ನು ನಡೆಸಬೇಕು. ನಮ್ಮ ಹಕ್ಕಿಗಾಗಿ ಎಲ್ಲರೂ ಒಂದುಕಡೆ ಸಭೆ ಸೇರಬೇಕಾಗಿದೆ ಎಂದರು.
ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಸ್ವಾಮೀಜಿಗಳು ರೈತಪರ ಧ್ವನಿ ಎತ್ತುತ್ತ ಬಂದಿದ್ದಾರೆ. 2A ಮೀಸಲಾತಿಗಾಗಿ ಸತತ ಹೋರಾಟ ಮಾಡಿದ್ದಾರೆ. ಹೊಡೆಸಿಕೊಂಡು ಮೀಸಲಾತಿ ಹೋರಾಟ ಮಾಡುತ್ತಿದ್ದಾರೆ. ಸರಕಾರಗಳು ಸ್ಪಂದಿಸಿಲ್ಲ. ಯಡಿಯೂರಪ್ಪ 3Bಗೆ ಸೇರಿಸಿದರು. ಬೊಮ್ಮಾಯಿ ಅವರು 2D ಮೀಸಲಾತಿಗೆ ಸೇರಿಸಿದ್ದಾರೆ ಎಂದರು.ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ನಮ್ಮ ಸಮಾಜದವರು ರಕ್ತದಾನ ಶಿಬಿರ ಮಾಡಿ ಮಾದರಿಯಾಗಿದ್ದಾರೆ. ಮೀಸಲಾತಿ ಹೋರಾಟಕ್ಕೆ ಕೊಪ್ಪಳ ಜಿಲ್ಲೆಯಿಂದ ಹೆಚ್ಚು ಭಾಗಿಯಾಗಿದ್ದಾರೆ. ಮೀಸಲಾತಿಗಾಗಿ ಎರಡೂ ಪೀಠದವರು, ಲಿಂಗಾಯತ ಸಮಾಜದ ಶಾಸಕರನ್ನು ಕರೆದುಕೊಂಡು ಹೋಗಿ ಸಿಎಂ ಭೇಟಿಯಾಗಬೇಕು ಎಂದು ಆಗ್ರಹಿಸಿದರು.
ಸ್ವಾಮೀಜಿ ಸೇರಿದಂತೆ 10 ಜನರು ರಕ್ತದಾನ ಮಾಡಿದರು.ಸಮಾಜದ ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಕಳಕನಗೌಡ ಕಲ್ಲೂರ, ಮಂಜುನಾಥ ಸೊರಟೂರ, ಚನ್ನಬಸವ ಸುಂಕದ, ರುದ್ರಗೌಡ ಸೊಲಬಗೌಡರ ಸೇರಿದಂತೆ ಮೊದಲಾದವರು ಮಾತನಾಡಿ, ಸ್ವಾಮೀಜಿಗಳು ರೈತರ ಬಗ್ಗೆ ಕಾಳಜಿ ವಹಿಸಿದ್ದಾರೆ. ರಕ್ತದಾನ ಶ್ರೇಷ್ಠ ದಾನ. 2028ರ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದವರನ್ನು ಆಯ್ಕೆ ಮಾಡೋಣ. ಹೆಚ್ಚು ಶಾಸಕರಿದ್ದರೆ ಮೀಸಲಾತಿಗೆ ಧ್ವನಿಯಾಗುತ್ತಾರೆ ಎಂದರು.
ಕರಿಯಪ್ಪ ಮೇಟಿ, ಶೇಖರ ಮತ್ತೇನವರ, ವೀರಣ್ಣ ಅಣ್ಣಿಗೇರಿ, ಸುರೇಶಗೌಡ, ಲತಾ ಚಿನ್ನೂರು. ಸಂಗಮೇಶ ಬಾದವಾಡಗಿ, ಕೆ.ಜಿ. ಪಲ್ಲೇದ, ಬಹದ್ದೂರ ಸಾಹುಕಾರ, ವೀರೇಶ ಹೊಸಪೇಟೆ, ಅಮರೇಶ ಕುಳಗಿ, ಗವಿಸಿದ್ದಪ್ಪ ಡಂಬಳ, ಸಿ.ಎಚ್. ಪಾಟೀಲ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ಶ್ರೀಶೈಲ ಗೊಂಡಬಾಳ ಪ್ರಾರ್ಥಿಸಿದರು, ವಿಶ್ವನಾಥ ಬರಿಬಸಪ್ಪನವರ ಪ್ರಾಸ್ತವಿಕವಾಗಿ ಮಾತನಾಡಿದರು ಹಾಗೂ ರವೀಂದ್ರನಾಥ ತೋಟದ ನಿರೂಪಿಸಿದರು.ಮೀಸಲಾತಿ ಹೋರಾಟದಿಂದ ಅಧಿಕಾರ ಪಡೆದವರು ಈಗ ಅದರ ಬಗೆಗೆ ಮಾತನಾಡುತ್ತಿಲ್ಲ: ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಿಂದ ಅಧಿಕಾರ ಪಡೆದವರು ಈಗ ಅದರ ಬಗ್ಗೆ ಮಾತನಾಡುತ್ತಿಲ್ಲ. ಸಮಾಜದ ಇಬ್ಬರು ಸಚಿವರಿದ್ದರೂ ಒಬ್ಬರು ಮಾತ್ರ ಮಾತನಾಡುತ್ತಿದ್ದಾರೆ ಎಂದು ಪಂಚಸಾಲಿ ಸಮಾಜದ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೀಸಲಾತಿ ನೀಡುವುದಿಲ್ಲ ಎಂದಿದ್ದಾರೆ. ಈ ಮೂಲಕ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ. ಈಗ ಮತ್ತೆ ಮೀಸಲಾತಿಗಾಗಿ ನಾವು ಸರಕಾರವನ್ನು ಕೇಳುವುದಿಲ್ಲ. ದೇವರು ಕೃಪೆ ತೋರಿದರೆ ಮೀಸಲಾತಿ ನೀಡಲಿ. ಮೀಸಲಾತಿಗಾಗಿ ಈಗಿನ ಇಬ್ಬರು ಸಚಿವರಲ್ಲಿ ಒಬ್ಬರು ಮಾತನಾಡುತ್ತಿದ್ದರು. ಆದರೆ, ರಾಜಕೀಯ ಕಾರಣದಿಂದಾಗಿ ಈಗ ಅವರೂ ಮಾತನಾಡುತ್ತಿಲ್ಲ. ಒಬ್ಬರಂತೂ ಎಂದೂ ನಮ್ಮ ಹೋರಾಟದ ಪರವಾಗಿ ಮಾತನಾಡಿಲ್ಲ ಎಂದರು.ಮೀಸಲಾತಿ ಹೋರಾಟದಿಂದ ಕೆಲವರು ಶಾಸಕ ಸ್ಥಾನ ಪಡೆದರು. ಹೋರಾಟದಿಂದ ಬೇರೆ ಬೇರೆ ಸಮಾಜದವರು ಲಾಭ ಪಡೆದುಕೊಂಡರು. ಇದರಲ್ಲಿ ನಮ್ಮ ಸಮಾಜದವರೂ ಪಡೆದುಕೊಂಡಿದ್ದಾರೆ ಎಂಬ ಸಮಾಧಾನವಿದೆ. ಆದರೆ, ಅಧಿಕಾರವಿದ್ದಾಗ ಮಾತನಾಡೋದಿಲ್ಲ. ಮಾಜಿಯಾದಾಗ ಮಾತನಾಡುತ್ತಾರೆ. ಸರಕಾರದವರೇ ಮೀಸಲಾತಿ ನೀಡುವುದಿಲ್ಲ ಎಂದಿದ್ದಾರೆ. ರಾಜಕೀಯ ಲಾಭಕ್ಕಾಗಿ ನಮ್ಮ ಸಮಾಜದವರು ಮಾತನಾಡುತ್ತಿಲ್ಲ, ಇದು ಸಹಜ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.