ಹಾವೇರಿ: ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರು ರೈತ ಪ್ರೇಮಿ ಹಾಗೂ ದೇಶ ಪ್ರೇಮಿಯಾಗಿದ್ದರು. ರೈತ ಕುಟುಂಬದಲ್ಲಿ ಜನಿಸಿದ್ದ ಅವರು, ಪ್ರಧಾನಿಯಾಗಿದ್ದ ವೇಳೆ ಬಜೆಟ್‌ನಲ್ಲಿ ರೈತರ ಪರವಾಗಿ ಅನೇಕ ಯೋಜನೆ, ಕಾನೂನುಗಳನ್ನು ರೂಪಿಸಿ ರೈತಪರ ಆಡಳಿತ ನೀಡಿದ್ದರೆಂದು ವಿಧಾನಸಭೆ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್‌ರವರ ಜನ್ಮದಿನ ಸ್ಮರಣಾರ್ಥ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವರ್ಷ ಡಿ.23ರಂದು ಚೌಧರಿ ಚರಣ್‌ಸಿಂಗ್‌ರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಂದಿನ ಬಜೆಟ್‌ನಲ್ಲಿ ರೈತರ ಪರವಾಗಿ ಘೋಷಣೆ, ಕಾನೂನು, ಭೂ ಮಾಲೀಕರು ಶೋಷಣೆಗೆ ಒಳಗಾಗಬಾರದೆಂಬ ಕಾನೂನು ಜಾರಿಗೆ ತಂದಿದ್ದರು. ಚರಣ್‌ಸಿಂಗ್‌ರು ರೈತ ಪ್ರೇಮಿ, ದೇಶ ಪ್ರೇಮಿಯಾಗಿದ್ದರು. ಬಡ ರೈತ ಕುಟುಂಬದಲ್ಲಿ ಹುಟ್ಟಿ, ಕೊನೆಯ ದಿನದವರೆಗೂ ರೈತಪರ ವಿಶೇಷ ಕಾಳಜಿಯುಳ್ಳ ಪ್ರಧಾನಿಗಳಾಗಿದ್ದರು. ರೈತಪರ ಕಾನೂನು ಅನುಷ್ಠಾನಕ್ಕೆ ತಂದು ಮುಂದಿನ ಪೀಳಿಗೆಗೆ ಉಳಿಸುವುದರ ಜೊತೆಗೆ ರೈತರನ್ನು ಶೋಷಣೆ ಮುಕ್ತರನ್ನಾಗಿ ಮಾಡಿದ್ದರು. ಎಲ್ಲ ರೀತಿಯ ಅನುಕೂಲ ಕಲ್ಪಿಸಿ ಕೊಟ್ಟಿದ್ದರು. ರೈತರನ್ನು ಒಗ್ಗೂಡಿಸಿಕೊಂಡೇ ಕಾನೂನು ಜಾರಿಗೆ ತಂದಿದ್ದರೆಂದು ಸ್ಮರಿಸಿದರು.ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಜಾಸ್ತಿಯಾದರೂ, ಕಡಿಮೆಯಾದರೂ, ಮಳೆ ಹೋಗಿ ಬರಗಾಲ ಬಿದ್ದರೂ ರೈತರು ಒಂದಿಲ್ಲೊಂದು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಪ್ರಾರಂಭಿಸಿ, ಸಮರ್ಪಕ ಅನುಷ್ಠಾನಕ್ಕೆ ಸೂಚನೆ ನೀಡಲಾಗುತ್ತಿದೆ. ಇದರ ಜೊತೆಗೆ ಎಥೆನಾಲ್, ಕೆಎಂಎಫ್‌ನವರು ಉತ್ಪನ್ನ ತೆಗೆದುಕೊಳ್ಳಲು ಮೀನಾಮೇಷ ಮಾಡುತ್ತಿದ್ದಾರೆ. ಸರ್ಕಾರ ಕೂಡ ಅವರ ಜೊತೆಗೆ ಚರ್ಚೆ ಮಾಡುತ್ತದೆ. ಈಗಾಗಲೇ ಖರೀದಿ ಕೇಂದ್ರ ಪ್ರಾರಂಭಿಸಿ ನೋಂದಣಿಗೆ ಅವಕಾಶ ಮಾಡಿದ್ದು, ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಆದಷ್ಟು ಬೇಗನೆ ಖರೀದಿ ಕೇಂದ್ರ ಆರಂಭ ಮತ್ತು ಸಮರ್ಪಕ ಅನುಷ್ಠಾನ ಮಾಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ರೈತ ಮುಖಂಡರಾದ ಶಿವಬಸಪ್ಪ ಗೋವಿ, ಸುರೇಶ ಛಲವಾದಿ, ಉಪ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ, ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್., ಹನುಮನಮಟ್ಟಿ ಸಸ್ಯ ರೋಗ ತಜ್ಞೆ ಬಸಮ್ಮ, ಶರತ್ ಮೈದೂರ, ಶಂಭು ಬಡ್ಡಿ, ರೈತ ಸಂಘದ ದಿಳ್ಳೆಪ್ಪ ಮಣ್ಣೂರ, ರಾಜು ತರ್ಲಘಟ್ಟ, ಶಿವಯೋಗಿ ಹೊಸಗೌಡ್ರ, ಕೃಷಿಕ ಸಮಾಜದ ಅಧ್ಯಕ್ಷ ಈರಣ್ಣ ಕಳ್ಳಿಹಾಳ, ಪ್ರಕಾಶ ಹಂದ್ರಾಳ, ಇಲಾಖೆಯ ಸುರೇಶ ನಾಯ್ಕ, ಚಂದ್ರಗೌಡ ಹೊಸಗೌಡ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಸನಗೌಡ ಸ್ವಾಗತಿಸಿದರು.ರೈತರಿಗೆ ನ್ಯಾಯ ಕೊಡಿಸಿ:ಬೆಳಗಾವಿ ಅಧಿವೇಶನದಲ್ಲಿ ರೈತರ ಸಂಕಷ್ಟದ ಬಗ್ಗೆ ಮಾತನಾಡಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೂ ಇಲ್ಲ, ಹುರಳಿಕುಪ್ಪಿಯಲ್ಲಿ 50-60 ಲಕ್ಷ ರು. ಮೊತ್ತದ ಹತ್ತಾರು ರೈತರ ಮೆಕ್ಕೆಜೋಳ ರಾಶಿ ಸುಟ್ಟು ಭಸ್ಮವಾಗಿದೆ. ಅಲ್ಲಿಯ ರೈತರಿಗೆ ಪರಿಹಾರ ಒದಗಿಸಿ ನ್ಯಾಯ ಕೊಡಿಸಬೇಕು. ರೈತರು ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಡಿದೋ, ಇಲ್ಲವೇ ರೂಟರ್‌ವೇಟರ್‌ನಲ್ಲಿ ಸಿಲುಕಿ ಮೃತಪಟ್ಟವರಿಗೆ ಕೇವಲ 2 ಲಕ್ಷ ಕೊಡುತ್ತಿರಿ, ಅದೇ ಐಪಿಎಲ್ ಕಾಳ್ತುಳಿತದಲ್ಲಿ ಸತ್ತವರಿಗೆ 25 ಲಕ್ಷ ರು. ಕೊಡುತ್ತಿರಿ. ಇದು ಯಾವ ನ್ಯಾಯ ರೀ.. ಎಂದು ಶಾಸಕರನ್ನು ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಪ್ರಶ್ನಿಸಿದರು.