ಹರಪನಹಳ್ಳಿ: ಮಾದಕ ದ್ರವ್ಯಗಳಿಗೆ ಯುವಜನತೆ ಬಲಿಯಾಗಬಾರದು ಎಂದು ಇಲ್ಲಿಯ ಡಿವೈಎಸ್ಪಿ ವೆಂಕಟಪ್ಪ ನಾಯಕ ತಿಳಿಸಿದ್ದಾರೆ.
ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗಿ ಚಿಕ್ಕ ವಯಸ್ಸಿನಲ್ಲಿಯೇ ಸಂಕಷ್ಟಕ್ಕೀಡಾಗುತ್ತೀರಿ. ಅಂತಹ ಮಾದಕ ದ್ರವ್ಯಗಳಿಗೆ ಬಲಿಯಾಗದೇ ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಪೋಲೀಸ್ ವೃತ್ತ ನಿರೀಕ್ಷಕ ನಾಗರಾಜ ಎಂ.ಕಮ್ಮಾರ ಮಾತನಾಡಿ, ತಪ್ಪು ಮಾಡುವುದಕ್ಕಿಂತ ಪೂರ್ವದಲ್ಲಿ ಯುವಕರಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿ ಕುರಿತು ಇಲಾಖೆಯಿಂದ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ದೇಹದ ಮೇಲೂ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳನ್ನು ಉಪಯೋಗಿಸಬಾರದು ಎಂದು ಹೇಳಿದರು.
ಮಾದಕ ವಸ್ತುಗಳ ಉಪಯೋಗ, ಸಾಗಾಣಿಕೆ ಮಾಡುವುದು ಅಪರಾಧ ಇದರಲ್ಲಿ 10 ವರ್ಷಗಳವರೆಗೆ ಶಿಕ್ಷೆ ಇದೆ ಎಂದು ಹೇಳಿದರು.ಎಸ್ ಎಸ್ ಜೈನ್ ಪಿ ಯು ಕಾಲೇಜು ಪ್ರಾಚಾರ್ಯ ಬಸವರಾಜ, ಉಪನ್ಯಾಸಕರಾದ ರವಿನಾಯ್ಕ, ಸತೀಶ ಮಾತನಾಡಿದರು.
ಇದಕ್ಕೂ ಪೂರ್ವದಲ್ಲಿ ಹರಿಹರ ವೃತ್ತದಿಂದ ಮಾದಕ ವಸ್ತುಗಳ ವಿರುದ್ದ ಜಾಗೃತಿ ಜಾಥಾ ಹೊಸಪೇಟೆ ರಸ್ತೆ ಮೂಲಕ ಐ ಬಿ ವೃತ್ತಕ್ಕೆ ನಂತರ ಪೋಲೀಸ್ ಠಾಣೆಗೆ ಆಗಮಿಸಿ ಮುಕ್ತಾಯಗೊಂಡಿತು.ಮಾದಕ ವಸ್ತುಗಳಿಂದ ಆಗುವ ಅನಾಹುತಗಳ ಪ್ಲೇಕಾರ್ಡಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಪಿಎಸ್ ಗಳಾದ ಶಂಭುಲಿಂಗ ಹಿರೇಮಠ, ನಾಗರತ್ನ, ರುದ್ರಪ್ಪ, ಸಿಬ್ಬಂದಿ, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.