ಶಿಗ್ಗಾಂವಿ: ಆ ದಿನಗಳಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ್ದ ಸಾರ್ವಜನಿಕ ಗಣೇಶೋತ್ಸವ ಈ ದಿನಗಳಲ್ಲಿ ಅರ್ಥ ಕಳೆದುಕೊಳ್ಳದಿರಲಿ ಎಂದು ಶಾಸಕ ಶ್ರೀನಿವಾಸ ಮಾನೆ ಆಶಯ ವ್ಯಕ್ತಪಡಿಸಿದರು.
ಸಾರ್ವಜನಿಕ ಗಣೇಶೋತ್ಸವದ ಹಿನ್ನೆಲೆಯನ್ನು ಪ್ರತಿಯೊಬ್ಬರೂ ಸಹ ಅರಿತುಕೊಳ್ಳಬೇಕಿದೆ. ಪರಸ್ಪರ ಬಾಂಧವ್ಯ ಬೆಸೆದು, ಸಂಬಂಧಗಳನ್ನು ಗಣೇಶೋತ್ಸವ ಹೆಚ್ಚಿಸಲಿದೆ. ಅರ್ಥಪೂರ್ಣ ಗಣೇಶೋತ್ಸವಕ್ಕೆ ಪ್ರತಿಯೊಬ್ಬರೂ ಸಹ ಸಂಕಲ್ಪಿಸಬೇಕಿದೆ ಎಂದು ಹೇಳಿದ ಅವರು ಇಂದಿನ ಆಧುನಿಕ ದಿನಗಳಲ್ಲಿ ಮೊಬೈಲ್ ಮೋಡಿ ಮಾಡಿದೆ. ಮಕ್ಕಳಿಂದ ವೃದ್ಧರವರೆಗೂ ಮೊಬೈಲ್‌ಗೆ ಅಂಟಿಕೊಂಡಿರುವುದನ್ನು ಕಾಣುತ್ತಿದ್ದೇವೆ. ಸಾಂಸ್ಕೃತಿಕ ಚಟುವಟಿಕೆಗಳು ಕಳಾಹೀನವಾಗುತ್ತಿವೆ.ಗಣೇಶೋತ್ಸವದ ನೆಪದಲ್ಲಿ ಜಾನಪದ ಕಲೆ, ಸಂಸ್ಕೃತಿ, ಸಂಪ್ರದಾಯ ಉಳಿಸಿ, ಬೆಳೆಸುವ ಕೆಲಸ ನಡೆಯಬೇಕಿದೆ ಎಂದರು.ಕಾಂಗ್ರೆಸ್ ಮುಖಂಡ ಯಾಸೀರ್‌ಖಾನ್ ಪಠಾಣ ಮಾತನಾಡಿ, ದೇಶಭಕ್ತಿ ಹಾಗೂ ಏಕತಾ ಶಕ್ತಿಗೆ ಗಣೇಶೋತ್ಸವ ಮುನ್ನುಡಿ ಬರೆದಿದೆ. ಇಂದಿನ ಯುವ ಸಮುದಾಯಕ್ಕೆ ಸಂಸ್ಕಾರ ಮತ್ತು ಈ ನೆಲದ ಪರಂಪರೆ ಕುರಿತು ಮಾಹಿತಿ ನೀಡುವ ಕೆಲಸವಾಗಬೇಕಿದೆ. ಹಬ್ಬಗಳು, ನಮ್ಮ ಸಂಪ್ರದಾಯ, ಆಚಾರ, ವಿಚಾರಗಳು ಎಲ್ಲ ಸಮಾಜಗಳನ್ನು ಬೆಸೆಯುವಂತಾಗಬೇಕಿದೆ ಎಂದರು.ಜಿಪಂ ಮಾಜಿ ಸದಸ್ಯ ಗುಡ್ಡಪ್ಪ ಜಲದಿ, ಮುಖಂಡರಾದ ಮಂಜುನಾಥ ಹಿರೂರ, ಪ್ರದೀಪ ಇಂಗಲಗಿ, ಚಂದ್ರಶೇಖರ ಮಾನೋಜಿ, ಚಂದ್ರಶೇಖರ ಮಾಯಣ್ಣನವರ, ರಿಯಾಜ್ ಗೌಳಿ, ಯುನುಸ್‌ಅಹ್ಮದ್ ಕಲ್ಯಾಣ ಇದ್ದರು.