ಹೊಸಪೇಟೆ: ದೇವದಾಸಿ ಸಮುದಾಯದ ಮಹಿಳೆಯರನ್ನು ಕನಿಕರದಿಂದ ನೋಡುವ ಬದಲು ಗೌರವದಿಂದ ಕಾಣಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ಶೈಲಜಾ ಇಂ. ಹಿರೇಮಠ ಹೇಳಿದರು.
ದೇವದಾಸಿ ಸಮುದಾಯವನ್ನು ಕೇವಲ ಸಾಮಾಜಿಕ ಸಮಸ್ಯೆಯ ದೃಷ್ಟಿಯಿಂದ ನೋಡದೆ, ಅದರ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವುದು ಅಗತ್ಯ. ಈ ಸಮುದಾಯವು ಅಕ್ಷರಜ್ಞಾನ, ಸಾಹಿತ್ಯ ಹಾಗೂ ಕಲಾ ಪರಂಪರೆಯೊಂದಿಗೆ ಆಳವಾದ ಸಂಬಂಧ ಹೊಂದಿದ್ದು, ವಚನಗಳು, ತತ್ವಪದಗಳು ಹಾಗೂ ವಿವಿಧ ಗ್ರಂಥಗಳನ್ನು ಅಧ್ಯಯನ ಮಾಡಿದ ಸಮುದಾಯವಾಗಿದೆ ಎಂದು ಹೇಳಿದರು.
ಎಲ್ಲಮ್ಮನ ಪೌರಾಣಿಕ ಕಥೆ ಹಾಗೂ ಅದರ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಂಡರೆ ದೇವದಾಸಿ ಸಮುದಾಯದ ಜೀವನ ಮತ್ತು ಅನುಭವಗಳನ್ನು ಚಿತ್ರಕಲೆ ಅಥವಾ ಇತರ ಕಲಾಕೃತಿಗಳ ಮೂಲಕ ಸಮರ್ಪಕವಾಗಿ ಚಿತ್ರಿಸಲು ಸಾಧ್ಯವಾಗುತ್ತದೆ. ದೇವದಾಸಿ ಸಮುದಾಯದ ಮಹಿಳೆಯರನ್ನು ಕೇವಲ ಲೈಂಗಿಕ ದೃಷ್ಟಿಕೋನದಿಂದ ನೋಡುವುದು ತಪ್ಪು. ತಮ್ಮ ಅಧ್ಯಯನದ ಅವಧಿಯಲ್ಲಿ ಕೊನೆಯವರೆಗೂ ಕನ್ಯೆಯರಾಗಿ ಬದುಕಿದ ದೇವದಾಸಿಯರನ್ನೂ ತಾವು ಕಂಡಿರುವುದಾಗಿ ತಿಳಿಸಿದರು.ಹಿಂದಿನ ಕಾಲದಲ್ಲಿ ದೇವದಾಸಿ ಪದ್ಧತಿ ನಿರ್ದಿಷ್ಟ ಜಾತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇತಿಹಾಸದಲ್ಲಿ ವಿವಿಧ ಕಾರಣಗಳಿಂದ, ಅದರಲ್ಲೂ ಹಿಂಸೆಗೆ ಒಳಗಾದ ಅನೇಕ ಮಹಿಳೆಯರು ನೆಮ್ಮದಿ ಹಾಗೂ ಆಶ್ರಯಕ್ಕಾಗಿ ಈ ಸಮುದಾಯವನ್ನು ಸೇರಿರುವ ಉದಾಹರಣೆಗಳು ಕಂಡುಬರುತ್ತವೆ ಎಂದರು.
ದೃಶ್ಯಕಲಾ ವಿಭಾಗದ ಅತಿಥಿ ಉಪನ್ಯಾಸಕ ಡಾ.ಕೃಷ್ಣೇಗೌಡ ಸ್ವಾಗತಿಸಿದರು. ಮಮ್ತಾಜ್ ಬಿ. ನಿರೂಪಿಸಿದರು.