ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಾಲಗಾಮೆ ರಸ್ತೆಯ ಭಾರತಿ ವಿದ್ಯಾಮಂದಿರದಲ್ಲಿ ಜರುಗಿದ ಮನೆಮನೆ ಕವಿಗೋಷ್ಠಿಯ ೨೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮನೆಮನೆ ಕವಿಗೋಷ್ಠಿವತಿಯಿಂದ ಹೊರತರಲಾದ "ಮನೆಮನೆ ಕಾವ್ಯ ಸೌರಭ " ಕವನ ಸಂಕಲನ ಕೃತಿಯನ್ನು ಬಿಡುಗಡೆ ಮಾಡಿ ಕೃತಿವಿಮರ್ಶೆ ಮಾಡುತ್ತಾ ಆಕರ್ಷಕ ಮುಖಪುಟವನ್ನುಳ್ಳ ಈ ಕವನ ಸಂಕಲನದಲ್ಲಿ ೭೫ ಕವಿಗಳ ಕವನಗಳು ಹಲವು ವಸ್ತು ವಿಷಯಗಳಿಂದ ಕವನಗಳು ಸುಂದರವಾಗಿ ರಚಿತವಾಗಿದ್ದು, ಅನುಭವಗಳ ಸಾರವನ್ನು ಒಳಗೊಂಡಿದ್ದು, ಹಾಸನ ಜಿಲ್ಲೆಯ ಮನೆ ಕವಿಗೋಷ್ಠಿ ಇತಿಹಾಸದಲ್ಲಿ ಹೆಗ್ಗುರುತಾಗಿದೆ. ಒಬ್ಬ ಕವಿಗೆ ಏಕಾಂತದ ಜೊತೆಗೆ ಲೋಕಾಂತವೂ ಇರಬೇಕಾಗಿದ್ದು, ಉತ್ತಮ ಆಲೋಚನೆ ಭಾಷಾಶೈಲಿ ಹಾಗೂ ಅಭಿವ್ಯಕ್ತಿಯೊಂದಿಗೆ ಸಮಕಾಲೀನ ಸಂಸ್ಕೃತಿಯನ್ನು ಸಾರುವ ಸಾಹಿತ್ಯ ರಚನೆ ಆಗಬೇಕಿದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಮನೆಮನೆ ಕವಿಗೋಷ್ಠಿಯ ಹಿರಿಯ ಸಂಘಟಕರಾದ ಭ ರಾ ವಿಜಯಕುಮಾರ್ ರವರು ೨೯ ವರ್ಷದ ಹಿಂದೆ ಮನೆಮನೆ ಕವಿಗೋಷ್ಠಿಯ ಸಂಘಟನೆಯಲ್ಲಿ ತೊಡಗಿಸಿಕೊಂಡವರನ್ನು ಸ್ಮರಿಸುತ್ತಾ ಇಲ್ಲಿಯವರೆಗೂ ನಿರಂತರವಾಗಿ ಸಾಗಿಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಗದ್ಯರೂಪಕ್ಕಿಂತ ಕಾವ್ಯರೂಪದಲ್ಲಿ ಹೆಚ್ಚಿಗೆ ಬೆಳಕಿಗೆ ಬಂದಿದ್ದು, ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕರ ಕೃತಿಗಳು ಕಾವ್ಯರೂಪದಲ್ಲಿವೆ.ಕಾವ್ಯವು ಮನುಷ್ಯನ ಭೌತಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಮೈಲಿಗಲ್ಲಾಗಿ ಉಳಿದುಕೊಂಡಿದೆ ಎನ್ನುತ್ತಾ ಕವಿಗೋಷ್ಠಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.ಸಂಚಾಲಕರಾದ ಸುಕನ್ಯ ಮುಕುಂದರವರು ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮಗಳಲ್ಲಿ ಹಲವು ಕೃತಿಗಳನ್ನು ಬಿಡುಗಡೆ ಮಾಡಿದ್ದು, ಹಲವು ಸಾಹಿತಿಗಳ ಕೃತಿಗಳನ್ನು ಕವಿಗಳು ವಿಮರ್ಶೆ ಮಾಡಿದ್ದಾರೆ. ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವಿಗಳ ಕವಿತೆಗಳ ವಿಮರ್ಶೆ ಹಾಗೂ ಮಾರ್ಗದರ್ಶನದಿಂದ ಪ್ರೋತ್ಸಾಹ ಸಿಕ್ಕಂತಾಗಿದೆ, ಎಲ್ಲಾ ಕವಿಗಳಿಗೆ ಸಂತಸ ತಂದಿದೆ ಎನ್ನುತ್ತಾ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಗೌರವ ಉಪಸ್ಥಿತಿಯನ್ನು ವಹಿಸಿದ್ದ ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್ ಅವರು ಸಂಚಾಲಕರ ಕಾರ್ಯವನ್ನು ಶ್ಲಾಘಿಸುತ್ತಾ, ಮನೆಮನೆ ಕವಿಗೋಷ್ಠಿಯು ಕವಿಗಳಿಗೆ ಉತ್ತಮವಾದ ವೇದಿಕೆಯಾಗಿದ್ದು ನಾವೆಲ್ಲ ಇಂತಹ ಉತ್ತಮ ಸಂಘಟನೆಯನ್ನು ಉಳಿಸಿ ಬೆಳೆಸುವುದರ ಮೂಲಕ ಕಾವ್ಯ ಸಂಸ್ಕೃತಿಯನ್ನು ಉಳಿಸೋಣ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ನಗರದ ಸೆಂಟ್ರಲ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲರು ಹಿರಿಯ ಸಾಹಿತಿಗಳೂ ಆದ ಚಂದ್ರಕಾಂತ ಪಡೆಸೂರ ರವರು ವಹಿಸಿದ್ದು ಕವನವಾಚನ ಮಾಡಿದ ಎಲ್ಲಾ ಕವಿಗಳ ಕವನಗಳನ್ನು ವಿಮರ್ಶೆ ಮಾಡುತ್ತಾ ಕವಿತೆಗಳ ವಸ್ತು-ವಿಷಯ, ಧೋರಣೆ ವಿಭಿನ್ನವಾಗಿದ್ದು ಉತ್ತಮವಾಗಿ ಮೂಡಿಬಂದಿವೆ ಎಂದು ಕಾವ್ಯ ಪ್ರಕಾರಗಳನ್ನು ವಿವರಿಸಿದರು. ಮನೆಮನೆ ಕವಿಗೋಷ್ಠಿಯು ೩೪೩ ದಿನ ನಿರಂತರವಾಗಿ ನಡೆದಿರುವುದು ಒಂದು ದಾಖಲೆಯೇ ಸರಿ, ಯುವ ಸಾಹಿತಿಗಳು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.
ಗೌರವ ಉಪಸ್ಥಿತಿಯನ್ನು ಸಾಹಿತಿ ಎಸ್ ಲಲಿತ ಹಾಗೂ ಸೆಂಟ್ರಲ್ ಕಾಮರ್ಸ್ ಕಾಲೇಜಿನ ಅಧ್ಯಕ್ಷರಾದ ಶ್ರೀಮತಿ ಪರಿಮಳ ಮಹೇಶ್ ಅವರು ವಹಿಸಿದ್ದರು.ಈ ಎಲ್ಲಾ ಕಾರ್ಯಕ್ರಮಗಳ ನಿರೂಪಣೆಯನ್ನು ಶ್ರೀ ದಿಬ್ಬೂರು ರಮೇಶ್, ಸಮುದ್ರವಳ್ಳಿ ವಾಸು ಹಾಗೂ ಪ್ರೇಮಾ ಪ್ರಶಾಂತರವರು ನಿರ್ವಹಿಸಿದರು. ಪ್ರಾರ್ಥನೆಯನ್ನು ಶೈಲಜಾ ಲೋಕೇಶ್ ಹಾಗೂ ಸಿಎನ್ ತಿಮ್ಮೇಗೌಡ ಮಾಡಿದ್ದು, ಸ್ವಾಗತವನ್ನು ಪರಮೇಶ್ ಮಡಬಲು, ಗಿರಿಜಾ ನಿರ್ವಾಣಿ ಹಾಗೂ ರೇಖಾ ಪ್ರಕಾಶ್ ಮಾಡಿದರು. ಸುಂದರೇಶ ಡಿ ಉಡುವಾರೆ ಹಾಗೂ ಕಾಮಾಕ್ಷಿ ಬಿಜಿ ಅವರು ವಂದನಾರ್ಪಣೆ ಸಲ್ಲಿಸಿದರು.