ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗಿದೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ರೈತರು ಕಾವೇರಿ ನದಿಗಿಳಿದು ಪ್ರತಿಭಟಿಸಿದರು.ಪಟ್ಟಣದ ಸ್ನಾನಘಟ್ಟದ ಬಳಿ ಭೂಮಿತಾಯಿ ಹೋರಾಟ ಸಮಿತಿ ಹಿರಿಯ ಮುಖಂಡ ಕೆಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತ ಕಾರ್ಯಕರ್ತರು ಕಾವೇರಿ ನದಿಗಿಳಿದು ರಾಜ್ಯ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಮಳೆ ಇಲ್ಲದೆ ರೈತ ಬೆಳೆದಿರುವ ಕಟಾವು ಹಂತದಲ್ಲಿರುವ ಕಬ್ಬು, ಬಾಳೆ, ರಾಗಿ ಸೇರಿದಂತೆ ಇತರೆ ಬೆಳೆಗಳು ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಸ್ಥಳೀಯ ನಾಲೆಗಳಿಗೆ ನೀರು ಹರಿಸಿ, ಬೆಳೆ ಉಳಿಸುವಂತೆ ರೈತರು ಧರಣಿ ನಡೆಸಿದರೂ ನಾಲೆಗಳಿಗೆ ನೀರು ಹರಿಸದ ಸರ್ಕಾರ ಇದೀಗ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಿ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಬಗ್ಗೆ ಕನಿಷ್ಠ ಪರಿಜ್ಞಾನವಿಲ್ಲದ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಹಿತ ಕಾಯುವ ಬದಲು ಉಡಾಫೆ ಉತ್ತರ ನೀಡುತ್ತಿದ್ದಾರೆ. ಈ ಸ್ಥಾನಕ್ಕೆ ಯೋಗ್ಯವಲ್ಲದ ಮುಖ್ಯ ಮಂತ್ರಿಯಾಗಿದ್ದಾರೆ ಎಂದು ಕಿಡಿಕಾರಿದರು.
ತಾಯಿ ಮಗುವಿಗೆ ಹಾಲುಣಿಸುವಂತೆ, ಕಟಾವಿಗೆ ಬಂದ ಬೆಳೆ ಒಣಗುತ್ತಿರುವುದರ ಬಗ್ಗೆ ರೈತರು ಮುಖ್ಯ ಮಂತ್ರಿಗಳ ಬಳಿ ನೀರು ಕೇಳಿ ಮನವಿ ಮಾಡಿದರೂ ರೈತರ ಸಂಕಷ್ಟಗಳಿಗೆ ನೆರವಾಗದ ಮುಖ್ಯ ಮಂತ್ರಿಗಳು ನೀರು ಕೇಳಬೇಡಿ, ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಉಡಾಫೆ ಉತ್ತರ ನೀಡುತ್ತಿರುವುದು ಎಷ್ಟು ಸರಿ. ಕೂಡಲೇ ತಮಿಳುನಾಡಿಗೆ ಹರಿಸುವ ನೀರನ್ನು ಸ್ಥಗಿತ ಗೊಳಿಸಿ ಸ್ಥಳೀಯ ನಾಲೆಗಳ ಮೂಲಕ ರೈತರ ಬೆಳೆಗಳಿಗೆ ನೀರುಹರಿಸಿ ಒಣಗುತ್ತಿರುವ ಬೆಳೆಗಳ ಉಳಿಸಿ ಎಂದು ರೈತುಖಂಡ ಕೆ.ಎಸ್ ನಂಜುಂಡೇಗೌಡ ಸರ್ಕಾರವನ್ನು ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಕೃಷ್ಣೇಗೌಡ ಬಲ್ಲೆನಹಳ್ಳಿ ಮಾತನಾಡಿ, ಮಂಡ್ಯ ಜಿಲ್ಲೆಯ ಶಾಸಕರು ರೈತರ ಪರವಾಗಿ ಯಾವುದೇ ಕೆಲಸಗಳ ನಿರ್ವಹಿಸದೆ ತಮ್ಮ ಕ್ಷೇತ್ರಗಳಲ್ಲಿನ ಅಕ್ರಮ ಭೂಮಿ ಒತ್ತುವರಿ ಮಾಡುವರ ಪರ ನಿಂತು ಕೆಲಸ ಮಾಡುತ್ತಿದ್ದಾರೆ. ಕಟಾಗಿಗೆ ಬಂದ ಬೆಳೆಯನ್ನು ರೈತರು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿ ನಾಲೆಗಳ ಮೂಲಕ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆಗಳ ನೀಡದೆ ನಮ್ಮ ಕ್ಷೇತ್ರಗಳ ಜನಪ್ರತಿನಿಧಿಗಳು ಬೆಂಗಳೂರು ಪ್ರದೇಶದಲ್ಲಿ ಐಶಾರಾಮಿ ಜೀವನ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲಾಶಯಕ್ಕೆ ಬರುತ್ತಿರುವ 5 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಈಗ ಸಾಂಕೇತಿಕವಾಗಿ ರೈತರು ನದಿಗಿಳಿದು ಪ್ರತಿಭಟಿಸಲಾಗಿದೆ. ನಾಳೆಯಿಂದ ಜಿಲ್ಲೆಯ ಎಲ್ಲಾ ರೈತರು ನದಿ, ರಸ್ತೆಗಿಳಿದು ಪಕ್ಷ ಭೇಧ ಮರೆತು ನೀರಿಗಾಗಿ ಹೋರಾಟ ಮಾಡಲಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಮಿತಿ ಕಾರ್ಯದರ್ಶಿ ಹುಂಡವಾಡಿ ಮಹದೇವು, ಖಜಾಂಚಿ ಮಹದೇವಪುರ ಕೃಷ್ಣ ಮುಖಂಡರಾದ ಮೇಳಾಪುರ ಜಯರಾಮು, ಮಂಜುನಾಥ್, ರಾಮಕೃಷ್ಣ, ರಾಮಚಂದ್ರು, ಕೃಷ್ಣ, ನಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಅಗ್ನಿ ಸಾಮಕ ದಳ ಸಿಬ್ಬಂದಿ ಅಹಿತಕರ ಘಟನೆಗಳು ನಡೆಯದಂತೆ ರೈತರಿಗೆ ನೆರವಾಗಿದ್ದರು.