ಮಲೆನಾಡು ಭಾಗದಲ್ಲಿ ಮಳೆ ಹಾಗೂ ಗಾಳಿಯ ಅಬ್ಬರ ಜೋರಾಗಿದ್ದು, ಪರಿಣಾಮವಾಗಿ ಹಲವೆಡೆ ರಸ್ತೆ ಮೇಲೆ ಮರ ಬಿದ್ದು ಕೆಲಕಾಲ ಸಂಚಾರಕ್ಕೆ ತೊಡಕಾಗಿತ್ತು. ಇನ್ನೂ ಕೆಲವೆಡೆ ವಿದ್ಯುತ್‌ ಕಂಬಗಳು ಮುರಿದುಬಿದ್ದು, ಸಕಲೇಶಪುರ ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹಲವು ಗ್ರಾಮಗಳು ವಿದ್ಯುತ್‌ ಸಂಪರ್ಕವನ್ನೇ ಕಳೆದುಕೊಂಡಿವೆ. ಚೆಸ್ಕಾಂ ಸಿಬ್ಬಂದಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇನ್ನು ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಕೆಲವೆಡೆ ಮಣ್ಣು ಕುಸಿದಿದೆ. ಆದರೆ, ತೆರವು ಕಾರ್ಯಾಚರಣೆ ತಂಡಗಳು ಬಿರುಸಿನಿಂದ ಕಾರ್ಯಾಚರಣೆ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ಬಿಸಿಲ ಬಿರುಬೇಗೆ ಹಾಗೂ ಉಷ್ಣ ವಾತಾವರಣದಿಂದ ಕಂಗೆಟ್ಟಿದ್ದ ಜನರು ಮಳೆ ಬರಲಿಲ್ಲ ಎಂದು ಆಕಾಶ ನೋಡುತ್ತಿದ್ದರು. ಆದರೆ, ಈಗ ಮಳೆಯ ಜತೆಗೆ ಬೀಸುತ್ತಿರುವ ಶೀತ ಗಾಳಿಗೆ ಜನರು ಮನೆ ಬಿಟ್ಟು ಹೊರಗೆ ಬಾರದಂತಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಹಾಗೂ ಗಾಳಿಯ ಅಬ್ಬರ ಜೋರಾಗಿದ್ದು, ಪರಿಣಾಮವಾಗಿ ಹಲವೆಡೆ ರಸ್ತೆ ಮೇಲೆ ಮರ ಬಿದ್ದು ಕೆಲಕಾಲ ಸಂಚಾರಕ್ಕೆ ತೊಡಕಾಗಿತ್ತು. ಇನ್ನೂ ಕೆಲವೆಡೆ ವಿದ್ಯುತ್‌ ಕಂಬಗಳು ಮುರಿದುಬಿದ್ದು, ಸಕಲೇಶಪುರ ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹಲವು ಗ್ರಾಮಗಳು ವಿದ್ಯುತ್‌ ಸಂಪರ್ಕವನ್ನೇ ಕಳೆದುಕೊಂಡಿವೆ. ಚೆಸ್ಕಾಂ ಸಿಬ್ಬಂದಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇನ್ನು ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಕೆಲವೆಡೆ ಮಣ್ಣು ಕುಸಿದಿದೆ. ಆದರೆ, ತೆರವು ಕಾರ್ಯಾಚರಣೆ ತಂಡಗಳು ಬಿರುಸಿನಿಂದ ಕಾರ್ಯಾಚರಣೆ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆದ್ದಾರಿ ಪಕ್ಕದಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಿರುವುದರಿಂದ ಭೂ ಕುಸಿತ ಆದಷ್ಟು ಕಡಿಮೆಯಾಗಿದೆ.

ಮಲೆನಾಡು ಹೊರತುಪಡಿಸಿದರೆ ಉಳಿದ ತಾಲೂಕುಗಳಲ್ಲಿ ಮಳೆ ಸಾಧಾರಣವಾಗಿ ಆಗುತ್ತಿದೆ. ಹಠಾತ್ತಾಗಿ ಮಳೆ ಆವರಿಸಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳಿಗೆ ಕೂಡ ಪೋಷಣೆ ಮಾಡಲು ಸಮಸ್ಯೆಯಾಗುತ್ತಿದೆ. ಜತೆಗೆ ಬೆಳೆಗಳಿಗೆ ಹಲವು ಕೀಟಬಾಧೆಗಳು ಕಾಡುತ್ತಿರುವುದರಿಂದ ರೈತರು ತೀವ್ರ ನಷ್ಟದ ಆತಂಕದಲ್ಲಿದ್ದಾರೆ. ಬೆಲೆ ಏರಿಕೆಯ ನಡುವೆಯೂ ಸಾವಿರಾರು ರುಪಾಯಿ ಬಂಡವಾಳ ಭೂಮಿಗೆ ಸುರಿದಿರುವ ರೈತರು ಈ ಭಾರೀ ತೀವ್ರ ನಷ್ಟ ಎದುರಿಸಬೇಕಾಗಬಹುದು.