ಕಳೆದ ಮೂರು ದಿನಗಳ ಮಳೆಗಾಳಿಗೆ ತಾಲೂಕಿನಾದ್ಯಂತ ೫೦೦ಕ್ಕೂ ಅಧಿಕ ಮರಗಳು ಧರೆಗುರುಳಿದ್ದರೆ, ೨೧೮ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ ಪರಿಣಾಮ ತಾಲೂಕಿನ ಸುಮಾರು ೧೨ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೧೩೦ಕ್ಕೂ ಅಧಿಕ ಗ್ರಾಮಗಳಲ್ಲಿ ಕಳೆದ ೪೮ ಗಂಟೆಗಳಿಂದ ವಿದ್ಯುತ್ ಕಣ್ಮರೆಯಾಗಿರುವುದರಿಂದ ಬಹುತೇಕ ಗ್ರಾಮಗಳು ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ. ಕಪ್ಪಳ್ಳಿ ಗ್ರಾಮ ಸಮೀಪ ಹೊಸದಾಗಿ ನಿರ್ಮಿಸಿರುವ ಚತುಷ್ಪಥ ರಸ್ತೆಯಲ್ಲೂ ಭೂಕುಸಿತ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಾದ್ಯಂತ ಮಂಗಳವಾರವು ವರುಣಾರ್ಭಟ ಮುಂದವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ಕಳೆದ ಮೂರು ದಿನಗಳ ಮಳೆಗಾಳಿಗೆ ತಾಲೂಕಿನಾದ್ಯಂತ ೫೦೦ಕ್ಕೂ ಅಧಿಕ ಮರಗಳು ಧರೆಗುರುಳಿದ್ದರೆ, ೨೧೮ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ ಪರಿಣಾಮ ತಾಲೂಕಿನ ಸುಮಾರು ೧೨ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೧೩೦ ಕ್ಕೂ ಅಧಿಕ ಗ್ರಾಮಗಳಲ್ಲಿ ಕಳೆದ ೪೮ ಗಂಟೆಗಳಿಂದ ವಿದ್ಯುತ್ ಕಣ್ಮರೆಯಾಗಿರುವುದರಿಂದ ಬಹುತೇಕ ಗ್ರಾಮಗಳು ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ.
ರಸ್ತೆ ಮೇಲೆ ಉರುಳುವ ಮರಗಳ ತೆರವಿಗೆ ವಿದ್ಯುತ್ ಹಾಗೂ ಅರಣ್ಯ ಇಲಾಖೆ ಸಿಬ್ಬಂಧಿ ಕಂಕಣಬದ್ದವಾಗಿ ನಿಂತಿದ್ದು ತಾಲೂಕಿನ ಯಾವುದೇ ರಸ್ತೆಯಲ್ಲಿ ಮರಗಳು ಉರುಳಿದರೂ ಅರ್ಧಗಂಟೆಯಲ್ಲಿ ತೆರವುಗೊಳಿಸಲಾಗುತ್ತಿರುವುದರಿಂದ ವಾಹನ ಸಂಚಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಡಚಣೆಯಾಗದಾಗಿದೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿ ೭೫ರ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದ್ದು ಆನೇಮಹಲ್ ಗ್ರಾಮ ಸಮೀಪದ ಅಡಾಣಿಗುಡ್ಡದ ಹಲವೆಡೆ ಭೂಕುಸಿತ ಸಂಭವಿಸಿದ್ದರೆ, ಕಪ್ಪಳ್ಳಿ ಗ್ರಾಮ ಸಮೀಪ ಹೊಸದಾಗಿ ನಿರ್ಮಿಸಿರುವ ಚತುಷ್ಪಥ ರಸ್ತೆಯಲ್ಲೂ ಭೂಕುಸಿತ ಸಂಭವಿಸಿದೆ. ಇದಲ್ಲದೆ ದೊಡ್ಡತಪ್ಪಲೆ ಗ್ರಾಮದ ಸಮೀಪ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದರೂ ವಾಹನ ಸಂಚಾರಕ್ಕೆ ತೊಡಕಾಗದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಈ ಮಧ್ಯೆ ಹೆದ್ದಾರಿಯ ಮಾರನಹಳ್ಳಿ ಗ್ರಾಮದ ಸಮೀಪ ಡಾಂಬರ್ ಲಾರಿ ಉರುಳಿ ರಸ್ತೆಗೆ ಡಾಂಬರ್ ಚೆಲ್ಲಿರುವ ಪರಿಣಾಮ ವಾಹನ ಸಂಚಾರಕ್ಕೆ ಹಲವು ಗಂಟೆಗಳ ಕಾಲ ತೊಡಕು ಉಂಟಾಗಿತ್ತು. ಹೇಮಾವತಿ ನದಿಯ ಹರಿವು ನಿತ್ಯಕ್ಕಿಂತ ಹೆಚ್ಚಿದ್ದರೆ, ಎತ್ತಿನಹೊಳೆಯಿಂದ ನೀರೆತ್ತುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ. ಉಳಿದಂತೆ ಬಹುತೇಕ ಎಲ್ಲ ನದಿಗಳು ಮೈದುಂಬಿ ಹರಿಯುತ್ತಿದ್ದು ಮಲೆನಾಡಿನಲ್ಲಿ ಮಳೆ ವೈಭವ ಕಳೆಕಟ್ಟಿದೆ. ಶಾಲೆಕಾಲೇಜುಗಳಿಗೆ ಸೋಮವಾರ ಹಾಗೂ ಮಂಗಳವಾರ ರಜೆ ಘೋಷಿಸಲಾಗಿದ್ದು ಬುಧವಾರ ಮುಂಜಾನೆಯ ಮಳೆಯನ್ನಾಧರಿಸಿ ರಜೆ ಘೋಷಿಸಲಾಗುವುದು ಎಂದು ತಾಲೂಕು ಆಡಳಿತ ಹೇಳಿಕೆ ನೀಡಿದೆ. ಆದರೆ ತಾಲೂಕು ಆಡಳಿತದ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಹಿಂದಿನ ದಿನವೇ ರಜೆ ಘೋಷಿಸಿದರು ಗ್ರಾಮೀಣ ಪ್ರದೇಶಗಳಿಗೆ ವಿಷಯ ತಿಳಿಯಲು ವಿಳಂಬವಾಗುತ್ತಿದೆ. ಇದರಲ್ಲಿ ಶಾಲೆ ಆರಂಭದ ವೇಳೆ ರಜೆ ಘೋಷಣೆ ಮಾಡಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.