ರೈತರ ಆದಾಯ ದ್ವಿಗುಣಗೊಳಿಸಿ: ಸಚಿವ ಲಾಡ್‌

KannadaprabhaNewsNetwork |  
Published : Jun 12, 2024, 12:35 AM IST
ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ ಲಾಡ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕನಿಷ್ಠ ಮೂವತ್ತು ಹಾಸಿಗೆಯ ಆಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೇರಿಸುವ ಭರವಸೆಯನ್ನು ಸಚಿವ ಸಂತೋಷ ಲಾಡ್‌ ನೀಡಿದರು.

ಅಳ್ನಾವರ:

ಕೃಷಿ ರಂಗದಲ್ಲಿ ಆದಾಯ ದ್ವಿಗುಣಗೊಳಿಸಲು ಸಾಂಪ್ರದಾಯಿಕ ಬೆಳೆಗಳ ಜತೆಗೆ ತೋಟಗಾರಿಕೆ ಬೆಳೆ ಬೆಳೆಯಲು ಇಲಾಖೆ ಅಧಿಕಾರಿಗಳು ರೈತರಿಗೆ ಆಸಕ್ತಿ ಮೂಡಿಸಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.ಪಟ್ಟಣದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಡಕೆಗೆ ಉತ್ತೇಜನ ನೀಡಲು ಸರ್ಕಾರ ಪ್ರತಿ ಎಕರೆಗೆ ₹ 70 ಸಾವಿರ ಆರ್ಥಿಕ ನೆರವು ನೀಡುತ್ತಿದೆ. ಈ ಪ್ರಯೋಜನ ಪಡೆಯಲು ರೈತರಿಗೆ ಅರಿವು ಮೂಡಿಸಬೇಕು ಎಂದರು.

ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕನಿಷ್ಠ ಮೂವತ್ತು ಹಾಸಿಗೆಯ ಆಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೇರಿಸುವ ಭರವಸೆ ನೀಡಿದ ಸಚಿವರು, ತುರ್ತಾಗಿ ಒಂದು ಆ್ಯಂಬುಲೆನ್ಸ್‌ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಅಳ್ನಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಉಂಟಾಗುತ್ತಿರುವ ಒತ್ತಡ ಕಡಿಮೆ ಮಾಡಲು ತುರ್ತಾಗಿ ೧೦೦ ಕೆವಿ ಸಾಮರ್ಥ್ಯದ ನಾಲ್ಕು ಟ್ರಾನ್ಸ್‌ಫಾರ್ಮರ್‌ ಒದಗಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ವಿದ್ಯುತ್ ಸರಬರಾಜನ್ನು ಸುಗಮಗೊಳಿಸಲು ಲಿಂಕ್‌ಲೈನ್‌ ವ್ಯವಸ್ಥೆ, ಅಡಚಣೆಯಾಗುವ ಗಿಡ- ಕಂಟಿ ಕಟಾವು ಮಾಡಬೇಕು ಎಂದರು. ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆ ದುರಸ್ತಿ ಮಾಡಲು ಗಮನ ಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಹೇಳಿದರು.

ತಾಲೂಕಿನಲ್ಲಿ ಶಿಥಿಲಗೊಂಡಿರುವ ಶಾಲಾ ಮತ್ತು ಅಂಗನವಾಡಿ ಕಟ್ಟಡಗಳ ಬಗ್ಗೆ ವರದಿ ಸಲ್ಲಿಸಲು ಮತ್ತು ಇಂತಹ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಮಕ್ಕಳು ಕುಳಿತುಕೊಳ್ಳದಂತೆ ನಿಗಾ ವಹಿಸಲು ಸೂಚಿಸಿದರು. ಸಭೆಯಲ್ಲಿ ಮಾಹಿತಿ ಪಡೆಯುವ ವೇಳೆ ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಕಚೇರಿಗೆ ಸಿಬ್ಬಂದಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಒತ್ತು ನೀಡಬೇಕು ಮತ್ತು ಜಲಜೀವನ ಮೀಷನ್ ಯೋಜನೆಯ ಕಾಮಗಾರಿಯ ಗುಣಮಟ್ಟದ ಕಡೆಗೆ ಗಮನ ಹರಿಸಬೇಕೆಂದು ಹೇಳಿದ ಸಚಿವರು, ಕಳೆದ ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಹಾನಿಗಿಡಾದ ತಾಲೂಕಿನ ಹುಲಿಕೇರಿ ಕೆರೆಯ ಬಲದಂಡೆ ಕಾಲುವೆಯ ಕಾಮಗಾರಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಹೊಸದಾಗಿ ಟೆಂಡರ್ ನಡೆಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ಅರವಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಶೋಕ ಜೋಡಟ್ಟಿ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಭೂಮಿ, ಕೆರೆ ಮತ್ತು ಸ್ಮಶಾನ ಭೂಮಿಗಳನ್ನು ಸರ್ವೇ ಮಾಡಿಸಿ ಒತ್ತುವರಿಗೊಂಡ ಭೂಮಿ ತೆರವುಗೊಳಿಸಲು ಕ್ರಮಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಪ್ರಶಾಂತ ತುರಕಾಣಿ, ಸಹಾಯಕ ನಿರ್ದೇಶಕ ಸಂತೋಷ ತಳಕಲ್, ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ, ಸಿಡಿಪಿಒ ಉಮಾ ಬಳ್ಳೊಳ್ಳಿ, ಕಾರ್ಮಿಕ ನಿರೀಕ್ಷಕಿ ಭಾಗ್ಯವತಿ ಕೋಟಿಮಠ, ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು90ರಷ್ಟು ಬಿತ್ತನೆ ಪೂರ್ಣ

ತಾಲೂಕಿನಲ್ಲಿ ೫೬೦೦ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಂಡಿದ್ದು ಈಗಾಗಲೇ ಶೇ. ೯೦ರಷ್ಟು ಬಿತ್ತನೆ ಮುಗಿದಿದೆ. ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆಗಿಂತ ೮೫ ಮೀಮೀ ಮಳೆ ಹೆಚ್ಚುವರಿಯಾಗಿ ಸುರಿದಿದ್ದು ಕಬ್ಬು ೧೭೮೦ ಹೆಕ್ಟೇರ್‌, ಭತ್ತ ೧೨೦೦ ಹೆಕ್ಟೇರ್‌ ಮೆಕ್ಕೆಜೋಳ, ೧೨೦೦ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅಳ್ನಾವರ ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಬೀಜದ ದಾಸ್ತಾನು ಇದೆ ಮತ್ತು ರಸಗೊಬ್ಬರದ ಕೊರತೆ ಇಲ್ಲ. ಯೂರಿಯಾ ಬದಲಾಗಿ ಪರ್ಯಾಯವಾಗಿ ಮಿಶ್ರ ಡಿಎಪಿ ಬಳಕೆ ಮಾಡುವಂತೆ ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ ಅಣ್ಣುಗೌಡರ ಸಚಿವರಿಗೆ ಮಾಹಿತಿ ನೀಡಿದರು. ಹಿಂದೆಂದೂ ಕಂಡು ಬಾರದ ಬರಗಾಲ ಈ ವರ್ಷ ಅನುಭವಿಸಿದ್ದೇವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಮರ್ಪಕವಾಗಿ ನಿಭಾಯಿಸಿ, ಜನರಿಗೆ ನೀರು, ಜಾನುವಾರುಗಳಿಗೆ ಮೇವು ಒದಗಿಸಿದ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಈ ಬಾರಿ ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ