ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ ಹಂಪಿಎತ್ತ ನೋಡಿದತ್ತ ಹತ್ತಾರು ಜಾತಿಯ ವಿಭಿನ್ನ ರೂಪ ಹೊಂದಿರುವ ಶ್ವಾನಗಳನ್ನು ಮನೆ ಮಾಲೀಕರು ಕರೆ ತಂದು ಬಹಳಷ್ಟು ಖುಷಿಯಿಂದ ಶ್ವಾನಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಹಂಪಿ ಉತ್ಸವದ ಕೊನೆ ದಿನ ಭಾನುವಾರ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ ಕಚೇರಿ ಹಿಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನವು ನೋಡುಗರನ್ನು ಸೂಜಿಕಲ್ಲಿನಂತೆ ಸೆಳೆಯುವ ಜತೆಗೆ ಬಹು ಆಕರ್ಷಿಣೀಯವಾಗಿತ್ತು.ಪ್ರದರ್ಶನದ ಆರಂಭದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಶ್ವಾನದಳದ (ಲ್ಯಾಬ್ರಡರ್ ತಳಿಯ) ಕರ್ತವ್ಯದ ಕರಾಮತ್ತನ್ನು ವಿಭಿನ್ನವಾಗಿ ಪ್ರದರ್ಶನ ನೀಡಿದವು.
ಅಪರಾಧ ಪ್ರಕರಣಗಳ ಪತ್ತೆ ಮತ್ತು ಬಾಂಬ್ ಪರಿಶೀಲನೆ ಕರ್ತವ್ಯ ನಿರ್ವಹಿಸಿದ ಈ ಶ್ವಾನಗಳ ಚಾಣಾಕ್ಷತೆಯನ್ನು ನೆರೆದಿದ್ದ ಪ್ರೇಕ್ಷಕರು ಕಣ್ತುಂಬಿಕೊಂಡರು.21 ಜಾತಿಯ 65 ಶ್ವಾನಗಳು ಭಾಗಿ:
ಈ ಬಾರಿಯ ಹಂಪಿ ಉತ್ಸವದಲ್ಲಿ 21 ನಾನಾ ಜಾತಿಯ ದೇಶಿ ಹಾಗೂ ವಿದೇಶಿ ತಳಿಗಳ 65 ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ 48 ಶ್ವಾನಗಳು 1 ವರ್ಷದೊಳಗಿನವು (ಅಡಲ್ಟ್ ವರ್ಗ), ಅದೇ ರೀತಿ 17 ಶ್ವಾನ 6 ತಿಂಗಳಿನವು (ಪಪ್ಪಿ ವರ್ಗ) ಇದ್ದವು.ವಿವಿಧ ಜಾತಿಗೆ ಸೇರಿದ ಶ್ವಾನ:
ಅತಿ ಎತ್ತರ, ದೊಡ್ಡ ಹಾಗೂ ನೀಳ ಕಾಯದ ಗ್ರೇಟ್ ಡೆನ್, ಚಿಕ್ಕದಾದ ಸಿಟ್ಸ್ ಹಾಗೂ ಪಮೋರಿಯನ್, ಬೇಟೆಗೆ ಹೆಸರಾದ ಮುಧೋಳ, ಕುಟುಂಬಕ್ಕೆ ಪ್ರಿಯವಾದ ಗೋಲ್ಡನ್ ರಿಟೈವರ್, ಶೀತ ವಲಯದಲ್ಲಿ ಮಾನವ ಅತ್ಯಂತ ಉಪಯುಕ್ತ ಸಂಗಾತಿ ಎನಿಸಿದ ಸೈಬಿರಿಯನ್ ಹಸ್ಕಿ, ಯುದ್ಧಕ್ಕೆ ಹೆಸರುವಾಸಿಯಾದ ಜರ್ಮನ್ ಶಫರ್ಡ್, ಮಾಲೀಕನಿಗೆ ಅತ್ಯಂತ ನಿಷ್ಠೆಯಿಂದಿರುವ ಡಾಬರ್ ಮನ್, ಭಾರತದಲ್ಲಿ ಜನಪ್ರಿಯತೆಗೆ ಪಾತ್ರವಾಗಿರುವ ಲ್ಯಾಬ್ರಡಾರ್, ಅಮೇರಿಕಾದ ಬುಲ್ಲಿ, ಬೇಗಲೆ, ಡ್ಯಾಷ್ಹಂಡ್, ಪಗ್, ರೊಟ್ವೀಲರ್, ಬಾಕ್ಸರ್, ಪೊಮೆರೇನಿಯನ್, ಚೌ ಚೌ, ಶಿಹ್ ತ್ಸು ಬುಲ್ಲಿ, ಕೇನ್ ಕೊರ್ಸೊ, ಕಾಕರ್ ಸ್ಪೈನಿಯಲ್, ಕಾಕರ್, ಗ್ರೇಟ್ ಡೇನ್, ಟಾಯ್ ಪೋಮ್, ಬೆಲ್ಜಿಯನ್ ಮಾಲಿನೋಸಿಸ್ ಸೇರಿ ಅನೇಕ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ತಳಿಗಳವಾರು ಮೊದಲು ಸ್ಪರ್ಧೆ ನಡೆಸಿ ಶ್ವಾನಗಳನ್ನು ಆಯ್ಕೆ ಮಾಡಿದ್ದು, ತಳಿವಾರು ಪ್ರಥಮ ಸ್ಥಾನ ಪಡೆದ ಶ್ವಾನಗಳನ್ನು ಕೊನೆ ಹಂತ ಸ್ಪರ್ಧೆಗೆ ಆಯ್ಕೆ ನಡೆಯಿತು. ಸ್ಪರ್ಧೆಯು ಸಹ ಅತ್ಯಂತ ತುರುಸು ಹಾಗೂ ಕುತೂಹಲವಾಗಿತ್ತು.ಚಾಂಪಿಯನ್ ಪಟ್ಟ ಪಡೆದ ಮುಧೋಳ ಶ್ವಾನ:
ಹಂಪಿ ಉತ್ಸವ -2025ರ ಶ್ವಾನ ಪ್ರದರ್ಶನದಲ್ಲಿ ಗದಗದ ನೀಲಕಂಠ ಅವರ ಮುಧೋಳ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಪ್ರಥಮ ಸ್ಥಾನ ಪಡೆದ ಈ ಶ್ವಾನದ ಮಾಲೀಕರಿಗೆ ₹10 ಸಾವಿರ ನಗದು ಪುರಸ್ಕಾರ ಮತ್ತು ಪದಕ ನೀಡಲಾಯಿತು.ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿ ಇವರ ಡಾಬರ್ ಮನ್ ಶ್ವಾನ ದ್ವೀತಿಯ ಸ್ಥಾನ ಪಡೆದು ₹ 7500 ನಗದು ಬಹುಮಾನ ಹಾಗೂ ಪದಕಕ್ಕೆ ಪಾತ್ರವಾಯಿತು. ಇನ್ನೂ ಕೊಟ್ಟೂರಿನ ಕೆ.ಪಿ. ಶಿವಕುಮಾರ್ ಅವರ ಲ್ಯಾಬ್ರಡಾರ್ ಶ್ವಾನ ತೃತೀಯ ಸ್ಥಾನ ಪಡೆದು ₹5000 ನಗದು ಮತ್ತು ಪದಕ ತನ್ನದಾಗಿಸಿಕೊಂಡಿತು. ಶ್ವಾನ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಚಾಲನೆ ನೀಡಿದರು.
ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಪ್ರೊ. ಡಾ. ಬಸವರಾಜ್ ಬಾಳಣ್ಣನವರ್, ಹಾಸನ ಪಶು ವೈದ್ಯಕೀಯ ಕಾಲೇಜಿನ ಡಾ. ಮಂಜುನಾಥ ಸ್ಪರ್ಧೆಯ ನಿರ್ಣಾಯಕರಾಗಿದ್ದರು.ಮೂಲ ಜಾತಿ ತಳಿ, ದೇಹದಾರ್ಡ್ಯತೆ, ಚುರುಕುತನ, ಚಾತುರ್ಯತೆ ಹಾಗೂ ಮಾಲೀಕರೊಂದಿಗೆ ಅವಿನಾಭಾವ ಸಂಬಂಧದ ಆಧಾರದ ಮೇಲೆ ವಿಜೇತ ಶ್ವಾನಗಳನ್ನು ಆಯ್ಕೆ ಮಾಡಲಾಯಿತು.
ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಈ ವೇಳೆ ಪಶುಸೇವೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಪೋಮ್ ಸಿಂಗ್ ನಾಯ್ಕ, ಸಹಾಯಕ ನಿರ್ದೇಶಕ ಡಾ. ಆಕ್ತರ್, ಇಲಾಖೆಯ ಇತರೆ ಅಧಿಕಾರಿಗಳಾದ ಡಾ. ಮಲ್ಲಿಕಾರ್ಜುನ, ಡಾ. ಯುಗಂಧರ್ ಮಾನ್ವಿ, ಡಾ. ಸಂತೋಷ್, ಡಾ. ಸತೀಶ್, ಚಿದಾನಂದಪ್ಪ ಬಿ., ಇಲಾಖೆಯ ಸಿಬ್ಬಂದಿ ಮಂಗಳ ಗೌರಮ್ಮ, ಪದ್ಮಜ, ಶೋಭಾ, ವಿಜಯ ಲಕ್ಷ್ಮೀ, ಶಾಂತಕುಮಾರಿ, ಚಂದನಾ ಸೇರಿದಂತೆ ಸಾರ್ವಜನಿಕರು ಇದ್ದರು.