ಹಳಿಯಾಳ: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಜಗಜೀವನ ರಾಂ ಅವರು ನಮ್ಮ ದೇಶದ ಹೆಮ್ಮೆಯ ಪುತ್ರರು. ಅವರ ತತ್ವ ಚಿಂತನೆಗಳನ್ನು ವಿಶ್ವಕ್ಕೆ ಸಾರೋಣ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಸೋಮವಾರ ಪಟ್ಟಣದ ಪುರಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಡಾ. ಅಂಬೇಡ್ಕರ್ ಅವರ ಮೇಲೆ ಸಂಶೋಧನಾ ಪ್ರಬಂಧಗಳು ಮಂಡನೆಯಾದಷ್ಟು ಯಾವ ಮಹಾಪುರುಷರ ಮೇಲೆಯೂ ಆಗಲಿಲ್ಲ. ಸಾಮಾಜಿಕ ಅಸಮಾನತೆ, ಬಡತನ, ಅನ್ಯಾಯ, ಅಧರ್ಮ, ಅಸ್ಪಶ್ಯತೆ, ಶೋಷಣೆ, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ ಡಾ. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಡಾ. ಬಾಬು ಜಗಜೀವನ ರಾಂ ಅವರು ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ ಎಂದರು.ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಬಲದಿಂದಲೇ ದೇಶದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ದೇಶದ ಪ್ರಜಾವ್ಯವಸ್ಥೆಗೆ ಭದ್ರ ಬುನಾದಿಯನ್ನು ಕಲ್ಪಿಸುವಂತಹ ಸಂವಿಧಾನವನ್ನು ನೀಡಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಅವರ ವಿಚಾರಧಾರೆಯನ್ನು ಅವಲೋಕನ ಮಾಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಈ ಎರಡೂ ಮಹಾನ್ ಸಾಧಕರ ವಿಚಾರಗಳ ಚಿಂತನೆ ಕೇವಲ ಅವರ ಜಯಂತಿಗೆ ಮಾತ್ರ ಸೀಮಿತಗೊಳಿಸದೇ ನಿರಂತರವಾಗಿ ನಡೆಯಬೇಕು ಎಂದರು.
ಉಪನ್ಯಾಸ, ಸಾಧಕರಿಗೆ ಸನ್ಮಾನ: ಡಾ. ಬಿ.ಆರ್. ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನ ರಾಮ್ ಅವರ ಬಗ್ಗೆ ಕನ್ನಡ ಉಪನ್ಯಾಸಕ, ಶಿಕ್ಷಣ ಚಿಂತಕ ಶಾಂತಾರಾಮ ಚಿಬುಲಕರ ಹಾಗೂ ನಿವೃತ್ತ ಉಪನ್ಯಾಸಕ ಪ್ರೊ. ಸುರೇಶ ಕಡೆಮನಿ ಉಪನ್ಯಾಸ ನೀಡಿದರು. ದಲಿತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಕಲಾವಿದರು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ತಹಸೀಲ್ದಾರ್ ಪ್ರವೀಣ ಹುಚ್ಷಣ್ಣನವರ, ಜಿಪಂ ಎಇಇ ಆರ್. ಸುರೇಶ, ಬಿಇಒ ಪ್ರಮೋದ ಮಹಾಲೆ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ, ಸಿಪಿಐ ಜೈಪಾಲ್ ಪಾಟೀಲ, ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ, ಚಿಕ್ಕ ನೀರಾವರಿ ಎಇಇ ವೀರೇಶ ಬಿಜಾಪುರ, ಮಾರುತಿ ಕಲಬಾವಿ, ರಾಜು ಮೇತ್ರಿ, ಚಂದ್ರಕಾಂತ ಕಲಬಾವಿ, ಯಲ್ಲಪ್ಪ ಹೊನ್ನೋಜಿ ಹಾಗೂ ದಲಿತ ಮುಖಂಡರು ಇದ್ದರು.