ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ಶಾಸಕ
ಸ್ವಾತಂತ್ರ್ಯೋತ್ತರ ಕಾಲದಲ್ಲಿ ಪ್ರತಿಯೊಬ್ಬ ಪ್ರಜೆಯ ಹಕ್ಕು, ಕರ್ತವ್ಯ ಹಾಗೂ ಇತಿಮಿತಿಯನ್ನು ನಿರ್ದಿಷ್ಟಗೊಳಿಸಿ ಸ್ವತಂತ್ರ ಭಾರತದ ಪ್ರಗತಿಗೆ ಮುನ್ನುಡಿ ಬರೆದಿದ್ದೇ ಸಂವಿಧಾನ. ಹೀಗಾಗಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸದಾ ಪ್ರಾತಃಸ್ಮರಣೀಯರು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಸೋಮವಾರ ಪಟ್ಟಣದ ಗಿಬ್ ವೃತ್ತದಲ್ಲಿ ಆಯೋಜಿಸಿದ್ದ ಕುಮಟಾದಿಂದ ಹೊನ್ನಾವರಕ್ಕೆ ತೆರಳುವ ಬೃಹತ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.ಅಂಬೇಡ್ಕರ್ ಅವರ ಸಮಾನತೆ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರುವ ಉದ್ದೇಶದಿಂದ ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ಆಯೋಜಿಸಲಾಗಿದ್ದ ಬೈಕ್ ರ‍್ಯಾಲಿಯ ಮುಂಚೂಣಿಯಲ್ಲಿ ಅಂಬೇಡ್ಕರ್ ರಥದಲ್ಲಿದ್ದ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆ ಮಾಡಿದರು. ಅಂಬೇಡ್ಕರ್ ಅಭಿಮಾನಿಗಳು ನೀಲಿ ಧ್ವಜಗಳನ್ನು ಹಿಡಿದು ಜಯಘೋಷಗೈದರು. ಬಳಿಕ ಅಲ್ಲಿಂದ ಹೊರಟ ಬೈಕ್ ರ‍್ಯಾಲಿ ರಾಷ್ಟ್ರೀಯ ಹೆದ್ದಾರಿ ೬೬ರ ಮೂಲಕ ಹೊನ್ನಾವರಕ್ಕೆ ತೆರಳಿ ಮರಳಿತು. ಶಿವಾನಂದ ಹೆಗಡೆ ಸುಷ್ಮಾ ರೆಡ್ಡಿ ಮಂಜುಳಾ ಮುಕ್ರಿ ಇತರರು ಇದ್ದರು.