ಮುಂಡರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಒಂದು ಜಾತಿಗೆ ಮಾತ್ರ ಸೀಮಿತವಾದವರಲ್ಲ. ಅವರು ಜಾತಿ ಎಂಬುದು ಮನುಷ್ಯನನ್ನು, ಮನುಷ್ಯನಿಂದ ಬೇರ್ಪಡಿಸುವ ಗೋಡೆ ಎಂದು ಜಾತಿ ಸಂಕೋಲೆಯನ್ನು ಬುಡ ಸಮೇತ ಕಿತ್ತೆಸೆದವರು ಎಂದು ಮುಖಂಡ ಪ್ರೊ. ಸತೀಶ ಪಾಸಿ ತಿಳಿಸಿದರು.ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಶ್ವದೆಲ್ಲೆಡೆ ಜ್ಞಾನದ ದಿನವಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವವನ್ನು ಆಚರಿಸಲಾಗುತ್ತದೆ. ಈ ಜಯಂತಿ ಕೇವಲ ಆಚರಣೆಗಾಗಿ ಮಾತ್ರ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ದಿನಕ್ಕೆ 18 ಗಂಟೆ ಶ್ರಮವಹಿಸಿ ಓದಿದ ಬಾಬಾಸಾಹೇಬ್ ಅಂಬೇಡ್ಕರ್ 32 ಪದವಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಅದರ ಪರಿಣಾಮವಾಗಿ ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ಕೊಡಲು ಸಾಧ್ಯವಾಯಿತು ಎಂದರು.
ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜ ಸುಧಾರಕ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ವಿಶೇಷವಾದ ಹಿಂದೂ ಕೋಡ್ ಬಿಲ್ ಮೂಲಕ ಬಲವಾದ ಬೆಂಬಲ ನೀಡಿದರು ಎಂದರು.
ಇದೇ ಸಂದರ್ಭದಲ್ಲಿ ಮುಖಂಡ ಎಚ್.ಡಿ. ಪೂಜಾರ, ಸಂವಿಧಾನ ಪೀಠಿಕೆ ಓದಿಸಿದರು. ಕಾರ್ಯಕ್ರಮದಲ್ಲಿ ದುರಗಪ್ಪ ವಿಠಲಾಪೂರ, ಸೋಮಣ್ಣ ಹೈತಾಪೂರ, ರಾಮಣ್ಣ ಕೋಳಿ, ಆನಂದಗೌಡ ಪಾಟೀಲ, ಚಿನ್ನಪ್ಪ ವಡ್ಡಟ್ಟಿ, ನಾಗೇಶ ಹುಬ್ಬಳ್ಳಿ, ರಾಜು ಡಾವಣಗೇರಿ, ನಾಗರಾಜ ಹೊಸಮನಿ, ಅವಿನಾಶ ಗೋಡಖಿಂಡಿ, ಮುತ್ತು ಹಾಳಕೇರಿ, ಬಸವರಾಜ ದೇಸಾಯಿ, ಸುರೇಶ ಮಾಗಡಿ, ವಿನೋದ ವಡ್ಡರ, ಬಸವಂತಪ್ಪ ಹೊಸಮನಿ, ನಿಂಗರಾಜ ಹಾಲಿನವರ, ಲಕ್ಷ್ಮಣ ತಗಡಿನಮನಿ, ಪವನ್ ಮೇಟಿ, ಚಂದ್ರಶೇಖರ ಪೂಜಾರ, ಶ್ರೀನಿವಾಸ ಕೊರ್ಲಗಟ್ಟಿ, ಎ.ವೈ. ನಲಗುಂದ, ಪಿಎಸ್ಐ, ಸಬ್ ರಜಿಸ್ಟರ್, ಸಾಮಾಜಿಕ ಅರಣ್ಯ, ಸಿಡಿಪಿಒ, ಅಲ್ಪಸಂಖ್ಯಾತರ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಅರಹುಣಸಿ ನಿರೂಪಿಸಿದರು.