ಸಂಶೋಧಕರಿಗೆ ಶಿಷ್ಯವೇತನ ನೀಡಲು ಆಗ್ರಹ

KannadaprabhaNewsNetwork |  
Published : Jul 01, 2026, 01:15 AM IST
6 | Kannada Prabha

ಸಾರಾಂಶ

ಶಿಷ್ಯವೇತನಕ್ಕೆ ಆಗ್ರಹಿಸಿ ನಮ್ಮ ಹೋರಾಟ 16ನೇ ದಿನಕ್ಕೆ ಮುಂದುವರಿದಿದೆ. ಮಂತ್ರಿಗಳು, ಕುಲಪತಿಗಳಿಂದ ನಮಗೇ ನ್ಯಾಯ ದೊರೆತಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಶಿಷ್ಯವೇತನಕ್ಕೆ ಆಗ್ರಹಿಸಿ ಕಳೆದ 15 ದಿನಗಳಿಂದ ಪ್ರತಿಭಟಿಸುತ್ತಿದ್ದ ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ನಗರದ ಪುರಭವನದಿಂದ ಕ್ರಾಫರ್ಡ್ ಹಾಲ್ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ಡಿ. ದೇವರಾಜ ಅರಸು ರಸ್ತೆ, ಹುಣಸೂರು ರಸ್ತೆ ಮೂಲಕ ಕ್ರಾಫರ್ಡ್ ಹಾಲ್ ತಲುಪಿತು.ಈ ವೇಳೆ ವಿದ್ಯಾರ್ಥಿನಿ ದೀಪಾ ಮಾತನಾಡಿ, ಶಿಷ್ಯವೇತನಕ್ಕೆ ಆಗ್ರಹಿಸಿ ನಮ್ಮ ಹೋರಾಟ 16ನೇ ದಿನಕ್ಕೆ ಮುಂದುವರಿದಿದೆ. ಮಂತ್ರಿಗಳು, ಕುಲಪತಿಗಳಿಂದ ನಮಗೇ ನ್ಯಾಯ ದೊರೆತಿಲ್ಲ. ಹೋರಾಟ ತೀವ್ರಗೊಳಿಸುತ್ತೇವೆ. ದಲಿತ ವಿದ್ಯಾರ್ಥಿಗಳನ್ನು ಬೀದಿಯಲ್ಲಿ ಕೂರಿಸಿರುವ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಪಾಠ ಕಲಿಸಬೇಕು. ದಲಿತರು ಕೇವಲ ಮತ ಬ್ಯಾಂಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮತಾ ಸೈನಿಕ ದಳದ ವೆಂಕಟಪ್ಪ ಮಾತನಾಡಿ, ಮೈಸೂರು ವಿವಿ ಬಜೆಟ್‌ ನಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಏನು ಮಾಡಿದೆ? ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು.ಹಿರಿಯ ದಲಿತ ಹೋರಾಟಗಾರ ಹರಿಹರ ಆನಂದಸ್ವಾಮಿ ಮಾತನಾಡಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ವರ್ಷಕ್ಕೆ 2 ಕೋಟಿ ಕೊಡಲು ಸಾಧ್ಯವಿಲ್ಲವೇ? ಸರ್ಕಾರಕ್ಕೆ ನೈತಿಕತೆ ಇದ್ದರೆ ವಿದ್ಯಾರ್ಥಿಗಳ ನ್ಯಾಯಯುತ ಮನವಿಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದ ಎಲ್ಲಾ ಸಂಶೋಧಕರಿಗೆ ಶಿಷ್ಯವೇತನ ಮಂಜೂರು ಮಾಡಬೇಕು. ಲ್ಯಾಪ್‌ ಟ್ಯಾಪ್ ಕೊಡಬೇಕು. ಮಾಸಿಕ ಬಾಡಿಗೆಯನ್ನು ರದ್ದುಗೊಳಿಸಬೇಕು. ಭೋಜನ ವ್ಯವಸ್ಥೆಯನ್ನು ಮುಂದುವರೆಸಬೇಕು. ಮಹಿಳಾ ಸಂಶೋಧಕಿಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕು. ಪಿಎಚ್.ಡಿ ಪ್ರವೇಶ ಶುಲ್ಕ, ನೋಂದಣಿ ಶುಲ್ಕ, ವಾರ್ಷಿಕ ಶುಲ್ಕಗಳನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.ನಟ, ಹೋರಾಟಗಾರ ಅಹಿಂಸಾ ಚೇತನ್, ವಿವಿಧ ಸಂಘಟನೆಗಳ ಮುಖಂಡರಾದ ಎಡತೊರೆ ಮಹದೇವಯ್ಯ, ನಾಗರಾಜ, ಶಂಕರ್ ರಾಮಲಿಂಗ, ಸೋಸಲೆ ಸಿದ್ದರಾಜು, ಸೋಮಯ್ಯ ಮಲೆಯೂರು, ದೇವನೂರು ಪುಟ್ಟನಂಜಯ್ಯ, ಶಿವಕುಮಾರ್, ಅಭಿಷೇಕ್, ಗಿರಿಯಣ್ಣ, ರಾಜು ಚಿಕ್ಕಣ್ಣ ಹಗಿನವಾಳು, ದ್ಯಾವಪ್ಪ ನಾಯಕ, ಮಂಜುನಾಥ, ಮಧು ಹೊಲೆಯಾರ್, ಪಿ. ಮರಂಕಯ್ಯ, ಸಂಶೋಧಕರಾದ ಧೀರಜ್, ಮುತ್ತುರಾಜು, ಪಂಚಮಿ, ದೀಪ, ವಿಶಾಖ, ರವಿಕುಮಾರ್, ನವೀನ, ಮೌನ, ಮಾದೇಶ, ಶಿವಸ್ವಾಮಿ ಸಣ್ಣಮಾದು, ಸಿದ್ದಾರ್ಥ ತಲಕಾಡು ಮೊದಲಾದವರು ಇದ್ದರು.----ಬಾಕ್ಸ್....ಭ್ರಷ್ಟಾಚಾರ ತನಿಖೆ ಆಗಬೇಕು- ಅಹಿಂಸಾ ಚೇತನ್ಮೈಸೂರು ವಿವಿ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಈ ಸರ್ಕಾರ ವಿದ್ಯಾರ್ಥಿಗಳನ್ನು ನಿರ್ಲಕ್ಷ್ಯ ಮಾಡಿದೆ. ಬಡ ಕುಟುಂಬ, ಗ್ರಾಮೀಣ ಪ್ರದೇಶದ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಶಿಷ್ಯವೇತನದಿಂದ ವಿದ್ಯಾರ್ಥಿಗಳು ಕೋಟ್ಯಾಧಿಪತಿಗಳಾಗುವುದಿಲ್ಲ. ಗುತ್ತಿಗೆದಾರರು, ಲ್ಯಾಂಡ್ ಮಾಫಿಯಾದವರಿಗೆ ಅನುಕೂಲ ಮಾಡುತ್ತಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿಗಳು ಮೈಸೂರು ವಿವಿ ಅಕ್ರಮಗಳ ಬಗ್ಗೆ ತನಿಖೆ ಮಾಡಬೇಕು ಎಂದು ಎಂದು ನಟ, ಹೋರಾಟಗಾರ ಅಹಿಂಸಾ ಚೇತನ್ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರ ವೇತನ ಭರಿಸುವುದು ವಿವಿಗಳಿಗೆ ಅಸಾಧ್ಯ: ಮಧು
ಬದುಕಿನ ಸವಾಲು ಎದುರಿಸಲು ಪುಸ್ತಕ ಓದಿ: ಡಾ.ಮಾನಸ