ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನ ಮೇಲ್ಪಂಕ್ತಿಯ ಆರ್ಥಿಕ ತಜ್ಞರಾಗಿದ್ದು, ಅವರು ಎಲ್ಲರೂ ಒಪ್ಪುವಂತ ಸಾಮಾಜಿಕ ಚಿಂತಕರಾಗಿದ್ದಾರೆ. ಅತ್ಯಂತ ಕೆಳಸ್ತರದ ಸಾಮಾಜಿಕ ಮತ್ತು ಹಿನ್ನೆಲೆಯಿಂದ ಬಂದವರಾಗಿದ್ದರೂ ಕಠಿಣ ಪರಿಶ್ರಮ ಮತ್ತು ಅಧ್ಯಯನದಿಂದಾಗಿ ಉನ್ನತ ಸ್ತರದ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಅವರು ಹಲವು ದೇಶಗಳ ಸಂವಿಧಾನ ಗ್ರಂಥಗಳನ್ನು ಅಧ್ಯಯನ ಮಾಡಿ ನಮ್ಮ ಸಮಾಜಕ್ಕೆ ಪೂರಕವಾದ ಭಾರತದ ಸಂವಿಧಾನ ರಚನೆ ಮಾಡಿ ದೇಶಕ್ಕೆ ನೀಡಿರುವ ಕೊಡುಗೆ ಅನನ್ಯ. ಅಂಬೇಡ್ಕರ್ ಅವರ ಶ್ರೇಷ್ಠ ಆರ್ಥಿಕ ಚಿಂತನೆಗಳನ್ನು ಮತ್ತಷ್ಟು ಪಸರಿಸುವ ಮೂಲಕ ಗೌರವಿಸಲು ಸರ್ಕಾರ ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ 45 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭವಾಗಲಿದೆ ಎಂದರು.ಬಾಬಾಸಾಹೇಬರು ನೀಡಿರುವ ಸಂವಿಧಾನದಡಿಯಲ್ಲಿಯೇ ದೇಶ ಸಾಗುತ್ತಿದೆ. ಕಷ್ಟ, ನಷ್ಟ, ಅಸ್ಪೃಶ್ಯತೆಯ ಅವಮಾನಗಳು, ಸಂಕಟ ಮತ್ತು ಸಂಕಷ್ಟಗಳ ನಡು ನಡುವೆಯೇ ಕಠಿಣ ಪರಿಶ್ರಮದಿಂದ ಮೇರು ಸಾಧನೆ ಮಾಡಿದ ಮೇರು ವ್ಯಕ್ತಿತ್ವ ಅಂಬೇಡ್ಕರ್ ಅವರದ್ದಾಗಿದ್ದು, ಅವರ ತತ್ವ ಚಿಂತನೆ ಆದರ್ಶಗಳು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಮಾದರಿ ಮತ್ತು ಪ್ರೇರಣಾದಾಯಕ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್, ರಾಜ್ಯ ಬೀಜ ನಿಗಮದ ಅಧ್ಯಕ್ಷ ಆಂಜಿನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್, ಜಿಪಂ ಸಿಇಒ ಡಾ.ವೈ ನವೀನ್ ಭಟ್, ಎಸ್‌ಪಿ ಕುಶಲ್ ಚೌಕ್ಸೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವನ್, ತಹಸೀಲ್ದಾರ್ ರಶ್ಮೀ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಮಾಜಿ ಶಾಸಕಿ ಅನುಸೂಯಮ್ಮ ಇದ್ದರು.