ಕನ್ನಡಪ್ರಭ ವಾರ್ತೆ ತುಮಕೂರುಶಿಕ್ಷಣ, ಸಂಸ್ಕಾರದ ಮೂಲಕ ನಾಡು ಕಟ್ಟುವ ಸಂಕಲ್ಪ ಮಾಡಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಜಗದ್ಗುರು ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ಬದುಕಿನ ದಾರಿ ತೋರಿಸಿದ್ದಾರೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಸಂಸ್ಥಾನ ಜಾತಿ, ಧರ್ಮ ಬೇಧವಿಲ್ಲದ, ಸರ್ವರನ್ನೂ ಆಧರಿಸಿ, ಸಹಾಯ ಮಾಡಿದ ಮಠವನ್ನಾಗಿ ಮಾಡಿದರು. ಪೂಜ್ಯರು ಭೌತಿಕವಾಗಿ ದೊಡ್ಡ ಕಟ್ಟಡಗಳನ್ನು ಕಟ್ಟುವದಷ್ಟೇ ಅಲ್ಲದೆ, ಜನರನ್ನು ಭೌದ್ಧಿಕವಾಗಿ ಬೆಳೆಸುವ ಪ್ರಯತ್ನ ಮಾಡಿದ ಅವರ ಸಾಧನೆ ಎಲ್ಲದಕ್ಕೂ ಮಿಗಿಲಾದದ್ದು. ಯಾವ ಸಮಾಜ ಧ್ವನಿ ಇಲ್ಲದೆ, ಕೆಳಮಟ್ಟದಲ್ಲಿದೆ ಎಂಬ ಭಾವನೆ ಇತ್ತೋ ಆ ಸಮಾಜ ತಲೆ ಎತ್ತಿ ಬಾಳುವಂತಹ ಶಕ್ತಿ ತುಂಬಿದರು. ಸಮಾಜಕ್ಕೆ ರಾಜಕೀಯ ಶಕ್ತಿ ಬಂದಿದೆ ಎಂದರೆ ಅದು ಪೂಜ್ಯರ ಕೃಪಾಶೀರ್ವಾದದಿಂದ ಎಂದು ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಜಾತ್ಯತೀತವಾಗಿ ಎಲ್ಲಾ ಸಮಾಜದವರಿಗೂ ಸಹಾಯ ಮಾಡುತ್ತಾ ಭಾವೈಕ್ಯ ಭಾವ ತುಂಬಿದ್ದ ಪೂಜ್ಯರು, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದು ಸಮಾಜದ ಏಳಿಗೆಗೆ ಶ್ರಮಿಸಿದ ಅವರು ಅಭಿನವ ವಿವೇಕಾನಂದ ಎಂದು ಬಣ್ಣಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪ್ರಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳು ಕೋಟಿ ವೃಕ್ಷ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು. ಶಾಖಾ ಮಠಗಳ ಆವರಣದಲ್ಲಿ ಗಿಡಮರಗಳನ್ನು ಬೆಳೆಸಿ ಹಸಿರು ಸಂಪತ್ತು ಹೆಚ್ಚಿಸಿದರು. ಸ್ವಾಮೀಜಿಗಳ ಆಶಯಗಳನ್ನು ಸಮಾಜದಲ್ಲಿ ಅನುಷ್ಟಾನಗೊಳಿಸುವ ಪ್ರಯತ್ನ ಮಾಡಿದರೆ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು.ಕಾರ್ಯಕ್ರಮಕ್ಕೆ ಮೊದಲು ಆಗಮಿಸಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಚುಂಚನಗಿರಿ ಕ್ಷೇತ್ರವನ್ನು ಕೇವಲ ಮೂರುವರೆ ದಶಕದಲ್ಲಿ ಮಹಾಕ್ಷೇತ್ರವನ್ನಾಗಿಸಿ ಸರ್ವರನ್ನೂ ಸೆಳೆಯುವ ಸುಕ್ಷೇತ್ರವನ್ನಾಗಿ ಪರಿವರ್ತಿಸಿದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಮಾಡಿದ್ದಾರೆ ಎಂದು ಹೇಳಿದರು.ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕರಾದ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಅವರು ಮಾತನಾಡಿ, ನಗರದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಪುತ್ಥಳಿ ಸ್ಥಾಪಿಸಬೇಕಿದ್ದು, ನಗರ ವ್ಯಾಪ್ತಿಯಲ್ಲಿ ಜಾಗ ನೀಡುವಂತೆ ಶಾಸಕ ಜ್ಯೋತಿಗಣೇಶ್ ಅವರಿಗೆ ಮನವಿ ಮಾಡಿದರು. ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿದರು. ಜಿಲ್ಲಾ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಡಾ.ಟಿ.ಎಸ್.ವಿಜಯಕುಮಾರ್ ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಲಕ್ಕೇಗೌಡ, ಕಾರ್ಯದರ್ಶಿ ಎಚ್‌ಎಂಟಿ ಬೋರೇಗೌಡ, ಸಿದ್ಧಾರ್ಥ ವಿವಿ ಕುಲಪತಿ ಡಾ.ನಿಂಗೇಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು, ಮುಖಂಡರಾದ ಬೋರೇಗೌಡ, ಕಲ್ಲಹಳ್ಳಿ ದೇವರಾಜು, ಸಿದ್ಧಲಿಂಗೇಗೌಡ, ಉಪ್ಪಾರಹಳ್ಳಿ ಕುಮಾರ್, ಜಯಮ್ಮ ಕವನಯ್ಯ, ಒಕ್ಕೂಟದ ಉಪಾಧ್ಯಕ್ಷ ಗೂಳೂರು ಜಿ.ಕೆ.ಶ್ರೀನಿವಾಸ್, ಖಜಾಂಚಿ ವಿಶ್ವೇಶ್ವರಯ್ಯ ಸೇರಿದಂತೆ ಒಕ್ಕಲಿಗ ಸಮಾಜದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಪ್ರಮುಖರು ಭಾಗವಹಿಸಿದ್ದರು.