ಮಂಗಳೂರು: ಆಯುರ್ವೇದ, ಆಯುಷ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಜನಜಾಗೃತಿ ಆಗಬೇಕಾದ ಅಗತ್ಯವಿದೆ ಎಂದು ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್ ಸೆಂಟರ್‌ನಲ್ಲಿ 2 ದಿನಗಳ ಆಯುಷ್ ಹಬ್ಬದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್ ಕಾಲೇಜು ಸೀಟ್‌ಗಳು ಖಾಲಿ ಉಳಿಯುತ್ತಿದ್ದರೆ, ಆಯುರ್ವೇದ ವೈದ್ಯಕೀಯ ಸೀಟುಗಳು ಭರ್ತಿಯಾಗುತ್ತಿವೆ. ಕೇಂದ್ರ ಸರ್ಕಾರ ಆಯುಷ್ ಸಚಿವಾಲಯ ಆರಂಭಿಸಿ ಆಯುಷ್ ವೈದ್ಯ ಪದ್ಧತಿಗೆ ಉತ್ತೇಜನ ನೀಡಿದೆ. 3 ಸಾವಿರ ಕೋಟಿ ರು. ಬಜೆಟ್ ನಿಗದಿಪಡಿಸುವ ಮೂಲಕ ಆಯುಷ್‌ಗೆ ದೊಡ್ಡ ಉತ್ತೇಜನ ನೀಡುತ್ತಿದೆ ಎಂದರು.ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಆಯುಷ್ ರತ್ನ ಪುರಸ್ಕಾರ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರಿಗೆ ಆಯುಷ್ ವಿಭೂಷಣ ಪುರಸ್ಕಾರ ಪ್ರದಾನ ಮಾಡಲಾಯಿತು. ಡಾ. ಡಿ. ವೀರೇಂದ್ರ ಹೆಗ್ಗಡೆ ಪರವಾಗಿ ಅವರ ಪುತ್ರಿ ಶ್ರದ್ಧಾ ಅಮಿತ್ ಅವರು ಪ್ರಶಸ್ತಿ ಸ್ವೀಕರಿಸಿದರು.ಈ ವೇಳೆ ಮಾತನಾಡಿದ ಶ್ರದ್ಧಾ ಅಮಿತ್, ಎಲ್ಲರೂ ಆಯುರ್ವೇದ, ನ್ಯಾಚುರೋಪತಿ ಅಳವಡಿಸಿಕೊಂಡು ಜೀವನ ನಡೆಸಬೇಕಿದೆ ಎಂದರು.
ಡಾ.ಎಂ. ಮೋಹನ ಆಳ್ವ ಮಾತನಾಡಿ, ಆಯುಷ್‌ಗೆ ವಿಶ್ವರೂಪ ನೀಡುವಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕೊಡುಗೆ ದೊಡ್ಡದು. ಸಮಾಜವನ್ನು ತಿದ್ದುವ, ಜಾಗೃತಿಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆಯುರ್ವೇದಕ್ಕೆ ವಿಶೇಷ ಮನ್ನಣೆ ಬರುವಲ್ಲಿ ಅವರು ಕೆಲಸ ಮಾಡಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್, ಕಣಚೂರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಯು.ಕೆ. ಮೋನು ಅತಿಥಿಗಳಾಗಿದ್ದರು.ಡಾ. ಸಚಿನ್ ನಡ್ಕ ಹಾಜರಿದ್ದರು. ಡಾ. ಕೇಶವ ಪಿ.ಕೆ. ಸ್ವಾಗತಿಸಿದರು. ಮೋಹನ ಆಳ್ವ ಅವರ ಬಗ್ಗೆ ಡಾ.ಡಿ.ವಿ. ಲೀಲಾಧರ್ ಅಭಿನಂದನಾ ಭಾಷಣ ಮಾಡಿದರು. ಡಾ. ಆಶಾಜ್ಯೋತಿ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧಕರಿಗೆ ಆಯುಷ್ ಭೂಷಣ ಪ್ರಶಸ್ತಿ, ಆಯುಷ್ ಶ್ರೀ ಪ್ರಶಸ್ತಿ, ಆಯುಷ್ ಯುವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.