ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಗುರುಭವನದಲ್ಲಿ ಕಲಬುರ್ಗಿ ಫೌಂಡೇಶನ್ ವಿಜಯಪುರ ಹಾಗೂ ಭೀಮಾಂತರಂಗ ಸಾಹಿತ್ಯಕ- ಸಾಂಸ್ಕೃತಿಕ ಜಗಲಿ ಇಂಡಿ ಸಹಯೋಗದಲ್ಲಿ ಡಾ.ಎಂ.ಎಂ.ಕಲಬುರ್ಗಿ ವಚನ ಸಿರಿ ಮತ್ತು ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಾಸ್ತವಿಕತೆ ಮಾತನಾಡುವಾಗ ನೋವುಗಳು ಬಹಳಷ್ಟು ಬರುತ್ತವೆ. ವಾಸ್ತವಿಕತೆಯ ವಿಚಾರಗಳಿಗೆ ಸಮಾಜ ಒಪ್ಪುವುದಿಲ್ಲ. ಇದನ್ನು ಮೀರಿ ಡಾ. ಕಲಬುರ್ಗಿಯವರು ಗಟ್ಟಿತನ ಪ್ರತಿಪಾದಿಸಿದ್ದಾರೆ. ಗಟ್ಟಿ ವಿಚಾರದಲ್ಲಿ, ವೈಚಾರಿಕತೆಯ ಚಿಂತನೆಯಲ್ಲಿ ಡಾ.ಕಲಬುರ್ಗಿಯವರು ಮೊದಲಿಗರಾಗಿ ನಿಲ್ಲುತ್ತಾರೆ. ಅಂತಹ ಗಟ್ಟಿ ನಿಲುವು ಹೊಂದಿದವರು ಡಾ.ಕಲಬುರ್ಗಿಯವರು ಎಂದು ಹೇಳಿದರು.ವೈಚಾರಿಕತೆಯ ಚಿಂತನೆಯನ್ನು ಹತ್ಯೆ ಮಾಡುವ ದುಷ್ಕರ್ಮಿಗಳನ್ನು ಸದೆಬಡೆಯಬೇಕು. ಡಾ.ಕಲಬುರ್ಗಿ ಅವರಂತ ವೈಚಾರಿಕತೆ ನಿಲುವು ಹೊಂದಿದ ಕುಟುಂಬಗಳಿಗೆ ಆಗಿರುವ ನೋವು ಸರ್ಕಾರ ಆಲಿಸಬೇಕು. ದುಷ್ಕರ್ಮಿಗಳನ್ನು ಬೇಗ ಬಂಧಿಸಲು ಸರ್ಕಾರಕ್ಕೆ ಮನವಿ ಮಾಡಿದರು. ದೇಶ, ನಾಡಿನುದ್ದಕ್ಕೂ ಕಲಬುರ್ಗಿ ಫೌಂಡೇಶನ್ ಮೂಲಕ ಡಾ.ಕಲಬುರ್ಗಿ ಅವರ ಚಿಂತನೆ, ವೈಚಾರಿಕ ನಿಲುವುಗಳು ಪ್ರಚುರಪಡಿಸುವ ಕೆಲಸ ನಡೆಯಲಿ ಎಂದು ಹೇಳಿದರು.
ಬೆಂಗಳೂರಿನ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ಡಾ.ಕಲಬುರ್ಗಿಯವರು ಸೈದ್ಧಾಂತಿಕ ಚಿಂತನೆ, ಬರವಣಿಗೆ ಬಿಟ್ಟು ಹೋಗಿದ್ದಾರೆ. ಈ ನೆಲ ನಿಲ್ಲುವುದಕ್ಕಾಗಿ ಅಲ್ಲ, ನಡೆಯುವುದಕ್ಕಾಗಿ ಎಂಬ ಸ್ಪಷ್ಟ ನಿಲುವು ಡಾ.ಕಲಬುರ್ಗಿಯವರು ಹೊಂದಿದ್ದರು ಎಂದರು. ಸಾಹಿತ್ಯ ಸಿರಿ ಪ್ರಶಸ್ತಿ ಸ್ವೀಕರಿಸಿ ಜಾನಪದ ತಜ್ಞ ಡಾ.ಎಂ.ಎಂ.ಪಡಶೆಟ್ಟಿಯವರು ಮಾತನಾಡಿ, ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದು ಆದರೆ ಜ್ಞಾನಿಯ ವೈಚಾರಿಕ ಚಿಂತನೆ ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮದು ಬಹು ಸಂಸ್ಕೃತಿ ನಾಡು, ಇದರ ಮೇಲೆ ಏಕ ಸಂಸ್ಕೃತಿ ಹೆರುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.
ವಚನ ಸಿರಿ ಪ್ರಶಸ್ತಿ ಸ್ವೀಕರಿಸಿದ ಡಾ.ದಾನಮ್ಮ ಝಳಕಿ, ಸಾಹಿತಿ ಸಿ.ಎಂ.ಬಂಡಗರ ಮಾತನಾಡಿದರು. ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮಧಭಾವಿ, ಕಲಬುರ್ಗಿ ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ ಮಾತನಾಡಿದರು. ಬಿಇಒ ಸುಜಾತಾ ಹುನ್ನೂರ ವೇದಿಕೆಯಲ್ಲಿದ್ದರು.ಇದೇ ವೇಳೆ ಫೌಂಡೇಶನ್ ವತಿಯಿಂದ ಸಾಹಿತ್ಯ ಸಿರಿ, ವಚನ ಸಿರಿ ಪ್ರಶಸ್ತಿ ನೀಡಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪ್ರೊತ್ಸಾಹಧನ ನೀಡಲಾಯಿತು.
ಸಾಹಿತಿ, ಸಂಶೋದಕ ಡಿ.ಎನ್.ಅಕ್ಕಿ, ಸುಧಾಕರಗೌಡ ಬಿರಾದಾರ, ಪಿ.ಬಿ.ಕತ್ತಿ, ಪ್ರಶಾಂತ ಕಾಳೆ, ಜಾವೀದ ಮೋಮಿನ, ಚನ್ನುಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಂಕರಗೌಡ ಬಂಡಿ, ಸಂಗನಗೌಡ ಹಚಡದ, ವೈ.ಜಿ.ಬಿರಾದಾರ, ಗೀತಯೋಗಿ, ಶ್ರೀಧರ ಹಿಪ್ಪರಗಿ, ಡಾ.ರಾಜಶ್ರೀ ಮಾರನೂರ, ಸಕೀನಾ ಪಾಟೀಲ, ಪ್ರಕಾಶ ಐರೋಡಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಭೀಮಣ್ಣ ಕವಲಗಿ ಮೊದಲಾದವರು ಪಾಲ್ಗೊಂಡಿದ್ದರು. ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿ, ಸಂತೋಷ ಬಂಡೆ, ಬಿ.ಸಿ.ಭಗವಂತಗೌಡರ ನಿರೂಪಿಸಿ, ವೈ.ಜಿ.ಬಿರಾದಾರ ವಂದಿಸಿದರು.