ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಎರಡು ಚಿನ್ನದ ಪದಕ ಪಡೆದಿರುವ ತಾಲೂಕಿನ ಕೆ. ಬೇವಿನಹಳ್ಳಿಯ ಗ್ರಾಮಾಂತರ ಪ್ರತಿಭೆ ಡಾ.ಕವನರನ್ನು ಜಿಲ್ಲಾ ಹಾಲು ಒಕ್ಕೂಟ ಹಾಗೂ ಕೆ ಎಂ ಎಫ್ ವತಿಯಿಂದ ಅಭಿನಂದಿಸಲಾಯಿತು.
ಕನ್ನಡಪ್ರಭವಾರ್ತೆ, ತುರವೇಕೆರೆ
ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಎರಡು ಚಿನ್ನದ ಪದಕ ಪಡೆದಿರುವ ತಾಲೂಕಿನ ಕೆ. ಬೇವಿನಹಳ್ಳಿಯ ಗ್ರಾಮಾಂತರ ಪ್ರತಿಭೆ ಡಾ.ಕವನರನ್ನು ಜಿಲ್ಲಾ ಹಾಲು ಒಕ್ಕೂಟ ಹಾಗೂ ಕೆ ಎಂ ಎಫ್ ವತಿಯಿಂದ ಅಭಿನಂದಿಸಲಾಯಿತು. ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಕೆ ಎಂ ಎಫ್ ನ ನಿರ್ದೇಶಕ ಸಿ.ವಿ.ಮಹಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ.ಕವನ ರನ್ನು ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಸಿ.ವಿ.ಮಹಲಿಂಗಯ್ಯ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಡಾ.ಕವನ ಸಾಕ್ಷಿ. ಅವರು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೂ ಸಹ ಬಹಳ ಆಸಕ್ತಿಯಿಂದ ತಾವು ಪಡೆದುಕೊಂಡಿದ್ದ ಪಠ್ಯಕ್ರಮವನ್ನು ಬಹಳ ಇಷ್ಠ ಹಾಗೂ ಕಷ್ಟಪಟ್ಟು ಓದಿದ್ದರಿಂದ ಎರಡು ಚಿನ್ನದ ಪದಕಗಳನ್ನು ಗಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು. ತಮ್ಮ ಹಾಲು ಒಕ್ಕೂಟದ ಆಶ್ರಯದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಮಹಿಳಾ ವಸತಿ ನಿಲಯದಲ್ಲಿ ಡಾ.ಕವನ ವಿದ್ಯಾಭ್ಯಾಸ ಮಾಡಿರುವುದೂ ಸಹ ಹೆಮ್ಮೆಯ ಸಂಗತಿ. ತಮ್ಮ ಹಾಲು ಒಕ್ಕೂಟದಲ್ಲಿ ಹಲವಾರು ಯೋಜನೆಗಳು ಇವೆ. ತುಮಕೂರಿನಲ್ಲಿ ಇರುವ ಮಹಿಳಾ ವಸತಿ ನಿಲಯದಲ್ಲಿ ಸುಮಾರು 224 ವಿದ್ಯಾರ್ಥಿನಿಯರಿಗೆ ಈಗಾಗಲೇ ಉಚಿತವಾಗಿ ವಸತಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸುಮಾರು 24 ಕೋಟಿ ವೆಚ್ಚದಲ್ಲಿ ಸುಮಾರು 500 ವಿದ್ಯಾರ್ಥಿನಿಯರು ಉಳಿದುಕೊಳ್ಳುವ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು. ಎರಡು ಚಿನ್ನದ ಪದಕ ವಿಜೇತೆ ಡಾ.ಕವನ ಮಾತನಾಡಿ, ನಾವು ಗ್ರಾಮಾಂತರ ಪ್ರದೇಶದಿಂದ ಬಂದವರು ಎಂಬ ಹಿಂಜರಿಕೆ ಬೇಡ. ಇಂಗ್ಲಿಷ್ ಭಾಷೆಯೇ ಸರ್ವಸ್ವ ಎಂಬ ಭಾವನೆಯೂ ಬೇಡ. ಶ್ರಮಪಟ್ಟು ಅಧ್ಯಯನ ಮಾಡಿದಲ್ಲಿ ಯಾವುದೂ ಅಸಾಧ್ಯವಲ್ಲ. ತಮ್ಮ ಈ ಸಾಧನೆಗೆ ನಮ್ಮ ಪೋಷಕರು, ಉಪನ್ಯಾಸಕ ವೃಂದ ಹಾಗೂ ನನ್ನ ವಿದ್ಯಾಭ್ಯಾಸಕ್ಕೆ ನೆರವು ನೀಡಿದ ಜಿಲ್ಲಾ ಹಾಲು ಒಕ್ಕೂಟದ ಹಾಲಿ ನಿರ್ದೇಶಕರಾದ ಸಿ.ವಿ.ಮಹಲಿಂಗಯ್ಯನವರು ಕಾರಣ ಎಂದರು. ಈ ವೇಳೆ ಹಾಲು ಒಕ್ಕೂಟದ ತಾಲೂಕು ವ್ಯವಸ್ಥಾಪಕ ಮಂಜುನಾಥ್, ವಿಸ್ತೀರಣಾಧಿಕಾರಿಗಳಾದ ಕಿರಣ್ ಕುಮಾರ್, ದಿವಾಕರ್, ಸುನಿಲ್, ಕೆ.ಬೇವಿನಹಳ್ಳಿ ಗ್ರಾಮದ ಮುಖಂಡ ಕುಮಾರ್, ಡಾ.ಕವನ ರ ತಾಯಿ ಶೋಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.