ನರಗುಂದ: ರಾಜ್ಯ ಸರ್ಕಾರ ಜಾರಿ ಮಾಡಿದ ಡಾ. ನಾಗಮೋಹನದಾಸ ವರದಿ ಅವೈಜ್ಞಾನಿಕವಾಗಿದೆ. ಬಲಗೈ ಸಮುದಾಯಗಳಿಗೆ ಉಂಟಾಗಿರುವ ಹಾನಿ ಹಾಗೂ ಅನ್ಯಾಯಗಳನ್ನು ಅಧ್ಯಯನ ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹಾಗೂ ನ್ಯಾಯವಾದಿ ಎಫ್.ವೈ. ದೊಡ್ಡಮನಿ ಸರ್ಕಾರವನ್ನು ಆಗ್ರಹಿಸಿದರು.
ಸರ್ಕಾರವು ವರದಿಯನ್ನು ಕೂಲಂಕಷವಾಗಿ ಪರಿಶಿಲನೆ ಮಾಡದೇ 111 ಜಾತಿಗಳನ್ನು 3 ವಿಭಾಗವಾಗಿ ಮಾಡಿ 6:6:5 ಅನುಪಾತದಲ್ಲಿ ಮೀಸಲಾತಿ ನೀಡಿದೆ. ರೋಸ್ಟರ್ ಬಿಂದು ಪ್ರಕಾರ ಬಿ ಮತ್ತು ಸಿ ಜಾತಿಗಳಿಗೆ ಶಿಕ್ಷಣ ಹಾಗೂ ಉದ್ಯೋಗ ಸಿಗುವುದು ಕನಸಿನ ಮಾತಾಗಿಯೇ ಉಳಿಯುತ್ತದೆ. ಹೀಗಾಗಿ ಸಣ್ಣಪುಟ್ಟ ಅಲೆಮಾರಿ ಹಾಗೂ ಇನ್ನು ಅನ್ಯ ಸಮಾಜಗಳಿಗೆ ಇದು ಮರಣ ಶಾಸನವಾಗಿದೆ. ರೋಸ್ಟರ್ ಬಿಂದುವನ್ನು ಸರಿ ಮಾಡಬೇಕೆಂದು ಆಗ್ರಹಿಸಿದರು.ಡಿಎಸ್ಎಸ್ ಜಿಲ್ಲಾ ಸಂಚಾಲಕ ವಿಜಯ ಚಲವಾದಿ ಮಾತನಾಡಿ, ಒಳಮೀಸಲಾತಿಯಲ್ಲಿ ಜಾರಿಗೆ ಮಾಡಿದ ರಾಜ್ಯ ಸರ್ಕಾರ ತಕ್ಷಣ ರೋಸ್ಟರ್ ಬಿಂದುವನ್ನು ಸರಿಪಡಿಸಬೇಕು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಈಗಾಗಲೇ ನಡೆದ ನೇಮಕಾತಿ/ ಪ್ರವೇಶ ಪ್ರಕ್ರಿಯೆಗಳ ಮರುಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಯಶವಂತ ನಡುವಿನಮನಿ, ಎಂ.ಡಿ. ದೊಡ್ಡಮನಿ, ಗುರು ದೊಡ್ಡಮನಿ, ಬಸವರಾಜ ಪೂಜಾರ, ಕಾಶಿ ನರಗುಂದ, ನೇತಾಜಿ ನರಗುಂದ, ಯಂಕಣ್ಣ ದೊಡಮನಿ, ಮುತ್ತು ಚಲವಾದಿ, ಮಂಜುನಾಥ ಹಳೇಮನಿ, ಸುನೀಲ ಚಲವಾದಿ, ರಾಜು ಚಲವಾದಿ, ಮಂಜು ರಂಗಣ್ಣವರ ಸೇರಿದಂತೆ ಮುಂತಾದವರು ಇದ್ದರು.