ಕನ್ನಡಪ್ರಭ ವಾರ್ತೆ ಮೈಸೂರು
ಭಾರತಾಂಬೆಯ ಮಡಿಲು ತನ್ನ ಒಡಲು, ಕನ್ನಡದವರೇ ಆದ ಡಾ.ರಾಧಾಕೃಷ್ಣ ಮತ್ತು ಡಾ.ವಿಶ್ವೇಶ್ವರಯ್ಯನವರು ಇದೇ ಮಾಸದಲ್ಲಿ ಹುಟ್ಟಿದವರು, ನಮ್ಮ ಕನ್ನಡದ ಅಚ್ಚಳಿಯದ ಧ್ರುವತಾರೆಯರು ಎಂದು ಕೆಪಿಟಿಸಿಎಲ್ನಿವೃತ್ತ ಮುಖ್ಯ ಎಂಜಿನಿಯರ್ಶಂಕರ್ದೇವನೂರು ಹೇಳಿದರು.ನಗರದ ಗೋಕುಲಂನಲ್ಲಿರುವ ವಿದ್ಯಾವರ್ಧಕ ಪಾಲಿಟೆಕ್ನಿಕ್ ನಲ್ಲಿ 57ನೇ ಎಂಜಿನಿಯರ್ ದಿನಾಚರಣೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ 164ನೇ ಹುಟ್ಟುಹಬ್ಬವನ್ನು ಆಚರಣೆಯಲ್ಲಿ ಅವರು ಮಾತನಾಡಿದರು.
ಹೂವು ತಂಪು ಸೂಸಿ ಎಲ್ಲರಿಗೂ ಪರಿಮಳ ಬೀರುತ್ತದೆ. ಇದರಿಂದ ವಾತಾವರಣ ಹಿತವಾಗಿರುತ್ತದೆ. ನಮ್ಮ ಜೀವನವೂ ಹೂವಿನಂತೆ ಇರಬೇಕು. ನಮ್ಮ ಬದುಕಿಗೆ ಮೆರಗು ನೀಡುವಂತ ಸಂಸ್ಕೃತಿಯನ್ನು ಕಟ್ಟುಕೊಳ್ಳಬೇಕು. ಸರ್ ಎಂ. ವಿಶ್ವೇಶ್ವರಯ್ಯ ಅವರ ಸಿದ್ಧಾಂತ, ತತ್ವಗಳು, ಅವರ ಸಾಧನೆ ಮತ್ತು ಚಿಂತನೆಗಳನ್ನು ತಮ್ಮ ವೈಯಕ್ತಿಕ ಬದುಕಿಗೆ ಅಳವಡಿಸಿಕೊಂಡಿದ್ದೇನೆ. ಇದೆಲ್ಲವನ್ನು ನೀಡಿದ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಕಷ್ಟದ ಕುಲುಮೆಯಲ್ಲಿ ಅರಳಿದ ಕಮಲಗಳು, ಬಡತನದಲ್ಲಿ ಬೆಳೆದು ಬೀದಿ ದೀಪದ ಬೆಳಕಿನಲ್ಲಿ ಓದಿ ಸಿವಿಲ್ ಎಂಜಿನಿಯರ್ ನಲ್ಲಿ ರ್ಯಾಂಕ್ ಪಡೆದು ಸಾಧನೆ ಮಾಡಿದ ಅಸಮಾನ್ಯರು. ಅವರ ಧನಾತ್ಮಕವಾದ ಚಿಂತನೆ, ಕಾರ್ಯಕ್ಷಮತೆ, ಕಷ್ಟದ ಕೆಲಸವನ್ನು ಆರಾಮವಾಗಿ ಪೂರೈಸಿದ ಧೀಮಂತ ವ್ಯಕ್ತಿ ಸರ್ ಎಂ. ವಿಶ್ವೇಶ್ವರಯ್ಯ ಎಂದು ಅವರು ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು 1916ನೇ ಇಸವಿಯಲ್ಲಿ ಇದಕ್ಕೆ ಕಾರಣ ಕರ್ತರಾದವರು ಸರ್ ಎಂ.ವಿ. ಅವರು. ಈಗವರು ನಮ್ಮ ಜೊತೆ ಇಲ್ಲ, ಆದರೆ ಅವರು ಕಟ್ಟಿದ ಕಾರ್ಖಾನೆಗಳಿವೆ, ಅವರು ಮಾಡಿದ ಸಾಧನೆಗಳಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಸದೃಢಗೊಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ಶಂಕರ ದೇವನೂರು ಅವರು ಆಡಿದ ನುಡಿಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ. ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು, ವಿದ್ಯಾಭ್ಯಾಸದ ಹೊರತು ಇತರೆ ಬೇಡದ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬಾರದು ಎಂದು ಹೇಳಿದರು.ಅಧ್ಯಕ್ಷತೆಯನ್ನು ವಿದ್ಯಾರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯನ್ನು ಬಿಡಬಾರದು, ಜೀವನದಲ್ಲಿ ಕಲಿಕೆ ನಿರಂತರವಾಗಿರಬೇಕು. ತಮ್ಮ ಜೀವನದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವ ಸರ್ ಎಂ.ವಿ. ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವವನ್ನು ಅನುಸರಿಸಿ, ವಿದ್ಯಾರ್ಥಿಗಳು ತಮ್ಮ ಜೀವನವನ್ನು ನಡೆಸಬೇಕು. ಸರ್ ಎಂ.ವಿ. ವಿಶ್ವೇಶ್ವರಯ್ಯ ಅವರ ಹಲವು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಜ್ಞಾನ ವಿಭಾಗದ ಉಪನ್ಯಾಸಕಿ ಯು. ಅಮೃತ ವರ್ಷಿಣಿ ಪ್ರಾರ್ಥಿಸಿದರು. ಸಂಸ್ಥೆಯ ಪ್ರಾಂಶುಪಾಲ ಕೃಷ್ಣ ಸ್ವಾಗತಿಸಿದರು. ಇಸಿ ವಿಭಾಗದ ಉಪನ್ಯಾಸಕ ರಾಕೇಶ್ ಬಾಬು ವಂದಿಸಿದರು. ಸಿವಿಲ್ ವಿಭಾಗದ ಉಪನ್ಯಾಸಕ ಸುರಭಿ ನಿರೂಪಿಸಿದರು.