ರಾಮನಗರ: ಜಾನಪದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ. ಅವರಿಗೆ ಕೇರಳಂ ರಾಜ್ಯದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ಹಾಗೂ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ. ರವಿ ಯು.ಎಂ ಅವರಿಗೆ 10 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ಕಳೆದ 5 ವರ್ಷಗಳಿಂದ ಪತ್ರಿಕೆಗಳಿಗೆ ಜಾನಪದ ಕಲಾವಿದರ ಜೀವನ, ಸಾಧನೆ, ವರದಿಗಾರಿಕೆ ಹಾಗೂ ಪರಿಚಯ ಸೇವೆಯನ್ನು ಪರಿಗಣಿಸಿ ರವಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಡಾ. ಯು.ಎಂ.ರವಿ ಅವರು ಜನಪದ ಕಲಾವಿದ ಅಕಾಡೆಮಿಕ್ ವಿದ್ವಾಂಸರಾಗಿ ಮಾತ್ರ ಉಳಿಯದೆ, ಜನಪದ ಕಲಾವಿದರ ಬದುಕು ಮತ್ತು ಸಾಧನೆಯನ್ನು ಅಕ್ಷರರೂಪಕ್ಕಿಳಿಸಿದ ಸಕ್ರಿಯ ವರದಿಗಾರರು. ಇವರು ಆರುನೂರಕ್ಕೂ ಹೆಚ್ಚು ಜನಪದ ಕಲಾವಿದರನ್ನು ವಿವಿಧ ಲೇಖನಗಳ ಮೂಲಕ ನಾಡಿಗೆ ಪರಿಚಯಿಸಿದ್ದಾರೆ. ವಿಶೇಷವಾಗಿ ಕರ್ನಾಟಕ ಜಾನಪದ ಪರಿಷತ್ತು ಪ್ರಕಟಿಸುವ ‘ಜಾನಪದ ಜಗತ್ತು'''' ಪತ್ರಿಕೆಗೆ ಹಿರಿಯ ಜನಪದ ಕಲಾವಿದರ ಜೀವನದ ಕುರಿತು ವರದಿಗಳನ್ನು ಸಿದ್ಧಪಡಿಸಿ ಪ್ರಕಟಿಸಿದ್ದಾರೆ.ಪತ್ರಿಕೆಗಳಲ್ಲಿ ಕಲಾವಿದರ ಸಾಧನೆಗಳ ಕುರಿತು ನಿರಂತರ ಲೇಖನಗಳನ್ನು ಬರೆಯುವ ಮೂಲಕ, ತೆರೆಯ ಮರೆಯಲ್ಲಿರುವ ಅಪ್ರತಿಮ ಪ್ರತಿಭೆಗಳಿಗೆ ಸಾರ್ವಜನಿಕ ವೇದಿಕೆ ಕಲ್ಪಿಸಿಕೊಡುವಲ್ಲಿ ಇವರ ಲೇಖನಿ ಶ್ರಮಿಸಿದೆ. 500ರಕ್ಕೂ ಹೆಚ್ಚು ರ್ಯಕ್ರಮಗಳಲ್ಲಿ ಕಲಾವಿದರ ಸಾಧನೆಯನ್ನು ಪರಿಚಯಿಸಿ, ಅವರಿಗೆ ಪ್ರಚಾರ ಮತ್ತು ಪ್ರಸಾರ ದೊರಕಿಸಿಕೊಡುವ ಮೂಲಕ ಪತ್ರಿಕೋದ್ಯಮ ಮತ್ತು ಸಂಶೋಧನೆಯನ್ನು ಬೆಸೆದಿದ್ದಾರೆ.
ಕಾಸರಗೋಡಿನ ಕುಡಾಲ್ ಮೇರ್ಕಳ ಸುಬ್ಬಯ್ಯಕಟ್ಟೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಠಾರದ ಆವರಣದಲ್ಲಿ ಶನಿವಾರ ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ. ಅವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.