- ಎಸ್.ಎಸ್.ಮಲ್ಲಿಕಾರ್ಜುನ ಅಭಿಮಾನಿ ಬಳಗದಿಂದ ಈವರೆಗೆ 400ಕ್ಕೂ ಅಧಿಕ ಜೋಡಿಗಳ ಮದುವೆ: ಮುದೇಗೌಡ್ರ ಗಿರೀಶ ಮಾಹಿತಿ - - -
ಹಿರಿಯ ಮುತ್ಸದ್ದಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಡಾ.ಶಾಮನೂರು ಶಿವಶಂಕರಪ್ಪನವರ 96ನೇ ಜನ್ಮದಿನದ ಅಂಗವಾಗಿ 50ಕ್ಕೂ ಅಧಿಕ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಜೂನ್ 17ರಂದು ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಪಕ್ಕದ ಎಂಬಿಎ ಕಾಲೇಜು ಮೈದಾನಕ್ಕೆ ಹೋಗುವ ಜಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್. ಮಲ್ಲಿಕಾರ್ಜುನ ಅಭಿಮಾನಿ ಬಳಗ ಅಧ್ಯಕ್ಷ ಮುದೇಗೌಡ್ರ ಗಿರೀಶ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು, ಶಾಸಕ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರು ನವಜೋಡಿಗಳಿಗೆ ಬಟ್ಟೆ, ವಧುವಿಗೆ ತಾಳಿ, ಕಾಲುಂಗುರ ವಿತರಿಸುವ ಮೂಲಕ ನವ ದಂಪತಿಗಳಿಗೆ ಶುಭ ಹಾರೈಸಲಿದ್ದಾರೆ ಎಂದರು.ಬಳಗದಿಂದ ಈವರೆಗೆ ಸುಮಾರು 400ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆದರ್ಶ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ನಿಯಮಾನುಸಾರವೇ ಸಾಮೂಹಿಕ ವಿವಾಹ ನೆರವೇರಲಿದೆ. ವಧುವಿಗೆ 18 ವರ್ಷ, ವರನಿಗೆ 21 ವರ್ಷ ಆಗಿಬೇಕು. ಈಗಾಗಲೇ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ವಧು-ವರರ ಜನ್ಮದೃಢೀಕರಣ ಇತರೆ ದಾಖಲೆಗಳ ಪರಿಶೀಲನೆ ಕಾರ್ಯವಾಗಿದೆ. ಹೆಸರು ನೋಂದಾಯಿಸಿದ್ದ ಜೋಡಿಗಳ ಪೈಕಿ 6 ಜೋಡಿ ಹೆಸರನ್ನು ಕೈ ಬಿಡಲಾಗಿದೆ ಎಂದು ಅವರು ಹೇಳಿದರು.
ಸಾಮೂಹಿಕ ವಿವಾಹಕ್ಕೆ 6 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಿದೆ. ವಧು-ವರವಿನ ಕಡೆಯವರಿಗೆ ಮದುವೆ ಹಿಂದಿನ ದಿನ ಜೂ.15ರ ರಾತ್ರಿ ಊಟ, ಮದುವೆ ದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ 5 ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಿದೆ. ವಧು-ವರರ ಕಡೆಯವರಿಗೆ ಕರೆ ತರಲು, ವಾಪಸ್ ಬಿಡಲು ಬಳಗದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸರ್ವಧರ್ಮೀಯರಿಗೂ ಸಾಮೂಹಿಕ ವಿವಾಹದಲ್ಲಿ ಅವಕಾಶ ಇದ್ದು, ಆಯಾ ಧರ್ಮದವರ ಪದ್ಧತಿ ಅನುಸಾರ ಮದುವೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಾಲೂಕುಗಳಷ್ಟೇ ಅಲ್ಲದೇ, ಹಾವೇರಿ, ಶಿವಮೊಗ್ಗ, ಗದಗ, ಚಿತ್ರದುರ್ಗ, ಭದ್ರಾವತಿ, ಚಿಕ್ಕಮಗಳೂರು ಕಡೆಯಿಂದಲೂ ಹೆಸರು ನೋಂದಾಯಿಸಿದ್ದಾರೆ. ಜೂ.17ರಂದು ವಿಧಾನ ಪರಿಷತ್ತು ಚುನಾವಣೆ ಹಿನ್ನೆಲೆ ಸಿಎಲ್‌ಪಿ ಸಭೆ ಸಹ ಇದೆ. ಆದರೂ, ಕಾಂಗ್ರೆಸ್ ನಾಯಕರು, ನಿಗಮ ಮಂಡಳಿ ಅಧ್ಯಕ್ಷರು, ಸ್ಥಳೀಯ ಮುಖಂಡರು ಭಾಗವಹಿಸುವರು. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಬಳಗವನ್ನು ಸಂಪರ್ಕಿಸಿ, ಜೂ.16ರವರೆಗೂ ಹೆಸರು ನೋಂದಾಯಿಸಲು ಅವಕಾಶ ಇದೆ ಎಂದು ಪರಶುರಾಮ ಹೇಳಿದರು.
- - -