ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ರಾಜ್ಯದಲ್ಲಿ ಗ್ರಾಮಾಭಿವೃದ್ಧಿಗೆ ನೀಡಿದ ಕೊಡುಗೆ ಪರಿಗಣಿಸಿ ಭಾರತೀಯ ಜೀವ ವಿಮಾ ನಿಗಮ ಪಾಲುದಾರ ಸಂಸ್ಥೆ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಜಂಟಿಯಾಗಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಂಚೆ ಚೀಟಿಯನ್ನು ಮಂಗಳವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದೆ.
ಭಾರತೀಯ ಜೀವ ವಿಮಾ ನಿಗಮ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಕರ್ನಾಟಕ ರಾಜ್ಯದ ಗ್ರಾಮದಲ್ಲಿರುವ ಆರ್ಥಿಕ ಹಿಂದುಳಿದ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ವಿಶೇಷ ಕಿರು ಮೈಕ್ರೋ ಇನ್ಶೂರೆನ್ಸ್ ಸೇವೆ ನೀಡುವ ಮೂಲಕ ದೇಶಕ್ಕೆ ಮಾದರಿ ವ್ಯವಸ್ಥೆಯಾಗಿದೆ. ಈ ಸಾಧನೆಯೊಂದಿಗೆ ಅನೇಕ ಕ್ಷೇತ್ರಗಳಲ್ಲಿ ಹೆಗ್ಗಡೆ ನೀಡಿದ ಅನನ್ಯ ಕೊಡುಗೆ ಗೌರವಿಸುವ ಸಲುವಾಗಿ ಮೂರು ಸಂಸ್ಥೆಗಳು ಭಾರತೀಯ ಅಂಚೆ ಇಲಾಖೆಯಿಂದ ಹೆಗ್ಗಡೆ ಅವರ ಅಂಚೆ ಚೀಟಿಯನ್ನು ಅವರ 78ನೇ ಜನ್ಮ ದಿನದಂದು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಶೃತಿ ಎಂಬ ರೋಬೋ ಅಂಚೆ ಚೀಟಿಯನ್ನು ಬಿಡುಗಡೆಗೆ ವೇದಿಕೆಗೆ ತಂದುಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮೊಮ್ಮಗ, ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಷ್ಠಾನದ ಸಹಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟಿ ಎಪಿಜೆಎಂಜೆ ಶೇಯ್ಕ್ ಸಲೀಂ ಮಾತನಾಡಿ, ಕಲಾಂ ಮತ್ತು ಡಾ. ಹೆಗ್ಗಡೆ ಚಿಂತನೆಗಳು ಒಂದೇ ದಾರಿಯಲ್ಲಿ ಸಾಗಿದ್ದು, ಈ ಸಂಬಂಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಅಬ್ದುಲ್ ಕಲಾಂ ಫೌಂಡೇಶನ್ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಸಂಬಂಧ ಬೆಸೆಯಲಿದೆ ಎಂದರು.ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಅಬ್ದುಲ್ ಕಲಾಂ ಪ್ರತಿಷ್ಠಾನದ ಸಂಗ್ರಹಾಲಯದಿಂದ ಅಬ್ದುಲ್ ಕಲಾಂ ಬಳಸುತ್ತಿದ್ದ ಅಮೂಲ್ಯ ವಸ್ತುಗಳನ್ನು ಕೊಡುಗೆ ನೀಡುವುದಾಗಿ ತಿಳಿಸಿದರು. ಮರ್ಸಿಡಿಸ್ ಬೆಂಝ್ ಕಾರು ಕಂಪನಿಯ ಪ್ರಧಾನ ವ್ಯವಸ್ಥಾಪಕ ಸಂಜಯ್ ಕೊಚರ್ ಮಾತನಾಡಿ, ಕಾರ್ ಮ್ಯೂಸಿಯಂನಲ್ಲಿ ಅಪೂರ್ವ ಕಾರುಗಳ ಸಂಗ್ರಹ ನೋಡಿ ಸಂತೋಷವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಮುಖ್ಯ ಅಂಚೆ ಅಧೀಕ್ಷಕ ರಮೇಶ್ ಪ್ರಭು ಅಂಚೆ ಚೀಟಿ ಬಿಡುಗಡೆಗೊಳಿಸಿದರು.ಭಾರತೀಯ ಜೀವ ವಿಮಾ ನಿಗಮದ ದಕ್ಷಿಣ ವಲಯದ ಹಿರಿಯ ವಲಯಾಧಿಕಾರಿ ಪುನಿತ್ ಕುಮಾರ್ ಮಾತನಾಡಿ, ಭಾರತೀಯ ಜೀವವಿಮಾ ನಿಗಮವು ಕಳೆದ ೧೭ ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಜನರ ಆರ್ಥಿಕ ಸ್ವಾವಲಂಬನೆಗಾಗಿ ಆರೋಗ್ಯ, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮ ಸೇವೆ ನೀಡುತ್ತಿದೆ. ದೇಶದೆಲ್ಲೆಡೆ ೧೫ ಲಕ್ಷ ಬಿಮಾ ಸಖಿಯರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸಂಬಳದ ಜೊತೆ ಕಮೀಶನ್ ಕೂಡಾ ನೀಡಲಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಜೀವವಿಮಾ ಕಂಂನಿಯಿಂದಾಗಿ ಸಾರ್ವಜನಿಕರು ಇಂದು ಜಾಗೃತರಾಗಿದ್ದು, ತಾವಾಗಿಯೆ ವಿಮೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಸಂಕಷ್ಟ ಪರಿಹಾರದಲ್ಲಿ ಜೀವವಿಮೆ ಕಲ್ಪವೃಕ್ಷದಂತೆ ಸಹಕಾರಿ ಎಂದರು.ಡಾ. ಹೆಗ್ಗಡೆ ಅವರನ್ನು ಎಲ್‌ಐಸಿ, ಭಾರತೀಯ ಅಂಚೆ ಇಲಾಖೆ, ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ಡಾ.ಹೆಗ್ಗಡೆ ಸಾಧನೆಯ ಮೆಲುಕು ನೋಟದ ದೃಶ್ಯ ಪ್ರಸಾರ ಪಡಿಸಲಾಯಿತು.ಕ್ಷೇಮವನದ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್, ಯೋಜನೆಯ ಟ್ರಸ್ಟಿಗಳಾದ ಉದಯ ಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್., ಪುತ್ತೂರು ಅಂಚೆ ಅಧೀಕ್ಷಕ ಕೆ. ರವೀಂದ್ರ ನಾಯಕ್ ಮತ್ತಿತರರಿದ್ದರು.ಎಲ್‌ಐಸಿಯ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್. ಭಟ್ ಸ್ವಾಗತಿಸಿದರು. ಭಾರತೀಯ ಜೀವ ವಿಮಾ ನಿಗಮ ಉಡುಪಿ ವಿಭಾಗದ ಮೈಕ್ರೋ ಇನ್ಶುರೆನ್ಸ್ ಮೆನೆಜರ್ ದಿನೇಶ್ ಪ್ರಭು ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೆಜಸ್ ನಿರೂಪಿಸಿದರು.