ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಸಾಲ ತೀರಿಸಿದರೆ ಸಾಕು ಎಂಬ ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುವುದು ಸಾಮಾನ್ಯವಾಗಿದೆ
ಯಲಬುರ್ಗಾ: ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ತೀವ್ರ ಕುಸಿತ ಕಂಡಿದೆ. ಕಾರಣ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಶೀಘ್ರ ತೆರೆಯುವಂತೆ ಒತ್ತಾಯಿಸಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ತಾಲೂಕು ಸಮಿತಿಯಿಂದ ಮಂಗಳವಾರ ಪಟ್ಟಣದ ಶಿರಸ್ತೇದಾರ ದೇವರಡ್ಡಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಭಾವಿಮನಿ, ಜಿಲ್ಲಾ ಕಾರ್ಯಾಧ್ಯಕ್ಷ ಪಿಡ್ಡನಗೌಡ ಮಾಲಿಪಾಟೀಲ್ ಮಾತನಾಡಿ, ಪ್ರತಿ ಸಲ ರೈತರ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ಖರೀದಿದಾರರು ದಿಢೀರ್ ಬೆಲೆ ಕಡಿಮೆ ಮಾಡುತ್ತಾರೆ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಸಾಲ ತೀರಿಸಿದರೆ ಸಾಕು ಎಂಬ ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಆದರೆ ರೈತರ ಪರವಾಗಿ ಕೆಲಸ ಮಾಡಬೇಕಾದ ಸರ್ಕಾರಗಳು ರೈತರು ತಮ್ಮಲ್ಲಿನ ಫಸಲು ಮಾರಾಟ ಮಾಡಿದ ಮೇಲೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸುತ್ತಾರೆ. ಇದರಿಂದ ರೈತರ ಹೆಸರಿನಲ್ಲಿ ವರ್ತಕರು ಲಾಭ ಪಡೆಯುತ್ತಾರೆಯೇ ಹೊರತು ವಾಸ್ತವದಲ್ಲಿ ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಬೆಳೆ ವಿಮೆಯಲ್ಲಿ ರೈತರಿಗೆ ಸಾಕಷ್ಟು ತಾರತಮ್ಯವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ವರ್ಷ ಅಪಾರ ಪ್ರಮಾಣದಲ್ಲಿ ಬೆಳೆ ಸಂಪೂರ್ಣ ಹಾನಿಯಾಗಿವೆ. ವಿಮೆ ಕಟ್ಟಿದ ಎಲ್ಲ ರೈತರಿಗೂ ವೈಜ್ಞಾನಿಕವಾಗಿ ಪರಿಹಾರ ಘೋಷಣೆಯಾಗಬೇಕು. ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಟೂರ್ ಪ್ಯಾಕೇಜ್ ಆಗದೇ ರೈತರ ಮತ್ತು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಕಿಸಾನ್ ಸೇನೆಯ ಪದಾಧಿಕಾರಿ ಹನುಮೇಶ ಎಸ್.ಎಚ್., ಶರಣಪ್ಪ ಚನ್ನಪ್ಪನಹಳಿ, ದುರಗಪ್ಪ ಬೇವಿನಗಿಡದ, ಮರಿಯಪ್ಪ ಭಾವಿಮನಿ, ರವಿಚಂದ್ರ ರೇವಡಿ, ಶಿವಪ್ಪ ದೊಡ್ಡಮನಿ ಸೇರಿದಂತೆ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.