ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Nov 26, 2025, 02:30 AM IST
ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಸಂಘಟನೆಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸುಮಾರು ವರ್ಷಗಳಿಂದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಪಾಠ ಮಾಡುತ್ತಾ ಬಂದಿರುವ ಉಪನ್ಯಾಸಕರ ಕುಟುಂಬ ಬೀದಿಗೆ ಬೀಳುವಂತಾಗಿದೆ ಎಂದರು.

ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರ ಸಂಘಟನೆ ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.

ಕಳೆದ ಕೆಲವು ತಿಂಗಳಿನಿಂದ ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದು, ಇದೀಗ ಸೇವಾನುಭವ ಇರುವವರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಧರಣಿ ಸ್ಥಳಕ್ಕೆ ಭೇಟಿ‌ ನೀಡಿದ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳ ಬಾಳು ಬೆಳಗಬೇಕಾದವರ ಬದುಕೇ ಕತ್ತಲೆಯ ಕೂಪಕ್ಕೆ ಬಿದ್ದಂತಾಗಿದೆ. ಮಾನವೀಯತೆಗಿಂತ ದೊಡ್ಡದು ಬೇರೆನಿಲ್ಲ. ಇದುವರೆಗೂ ಕಡಿಮೆ ಗೌರವಧನಕ್ಕೆ ಸೇವೆ ಸಲ್ಲಿಸಿದವರ ಬದುಕು ಹಸನುಗೊಳಿಸುವ ಹೊಣೆ ಸರ್ಕಾರದ್ದು. ಈ ನಿಟ್ಟಿನಲ್ಲಿ ಪ್ರತಿಭಟನಾನಿರತರಿಗೆ ನ್ಯಾಯ ದೊರಕಲಿ, ಈ ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸುಮಾರು ವರ್ಷಗಳಿಂದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಪಾಠ ಮಾಡುತ್ತಾ ಬಂದಿರುವ ಉಪನ್ಯಾಸಕರ ಕುಟುಂಬ ಬೀದಿಗೆ ಬೀಳುವಂತಾಗಿದ್ದು, ಈ ಪರಿಸ್ಥಿತಿಗೆ ಉನ್ನತ ಶಿಕ್ಷಣ ಇಲಾಖೆಯೇ ಹೊಣೆ. ಪರಿಷ್ಕೃತ ಮೆರಿಟ್ ಪಟ್ಟಿಯಿಂದಾಗಿ ಸೇವಾನುಭವ ಇರುವವರು ಕೆಲಸ ಕಳೆದುಕೊಳ್ಳುವಂತಾಗಿದೆ. ಅಂಗವಿಕಲರಿಗೆ ಹೆಚ್ಚುವರಿ 10 ಅಂಕಗಳನ್ನು ಪರಿಗಣಿಸುವ ಮೂಲಕ ಆದ್ಯತೆ ನೀಡಲಾಗಿದೆ. ಮೆರಿಟ್ ಪಟ್ಟಿ ಅಂಕಗಳನ್ನು ಆಧರಿಸಿರಬೇಕೇ ಹೊರತು ಉಳಿದ ವಿಷಯಗಳನ್ನಲ್ಲ. ಕೂಡಲೇ ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಸಚಿವರೊಂದಿಗೆ ಸಮಾಲೋಚಿಸಿ, ಅನ್ಯಾಯ ತಡೆಗೆ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ಮಾತನಾಡಿ, ಅತಿಥಿ ಉಪನ್ಯಾಸಕರಲ್ಲಿ ಕ್ವಾಲಿಫೈಡ್, ನಾನ್ ಕ್ವಾಲಿಫೈಡ್ ಎಂಬ ಭೇದ ತೋರದೇ ಸೇವಾನುಭವ ಇರುವವರನ್ನೂ ಒಳಗೊಂಡಂತೆ ಮೊದಲಿನ ಪ್ರಕಾರ ಕೌನ್ಸೆಲಿಂಗ್ ನಡೆಯಲಿ. ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ, ಸೇವಾ ವಿಲೀನತೆ ನೀಡಲಿ. ಇದಕ್ಕಾಗಿ ಗದುಗಿನಲ್ಲಿ ಹೋರಾಟ ಆರಂಭವಾಗಿದೆ. ಅಧಿವೇಶನದೊಳಗಾಗಿ ಬೇಡಿಕೆ ಈಡೇರಬೇಕು. ಇಲ್ಲದಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಉಗ್ರ ಹೋರಾಟ ಅನಿವಾರ್ಯ. ಕಾನೂನು ಸಚಿವರು ಮಧ್ಯೆಪ್ರವೇಶಿಸಿ ಸಮಸ್ಯೆ ಇತ್ಯರ್ಥಗೊಳಿಸುವ ವಿಶ್ವಾಸವಿದೆ ಎಂದರು.

ಪ್ರತಿಭಟನೆಯಲ್ಲಿ ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಹುಬ್ಬಳ್ಳಿ- ಧಾರವಾಡ ಸೇರಿದಂತೆ ದೂರದೂರುಗಳಿಂದ ಸುಮಾರು ಸಾವಿರ ಜನ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬುಧವಾರದಿಂದ ತರಗತಿ ಬಹಿಷ್ಕರಿಸಿ, ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಕರೆ ನೀಡಲಾಯಿತು.ಈ ವೇಳೆ ಸಂಘಟನೆ ಪದಾಧಿಕಾರಿಗಳು, ನೂರಾರು ಅತಿಥಿ ಉಪನ್ಯಾಸಕರು ಇದ್ದರು.

ಪೆಟ್ರೋಲ್ ಸುರಿದುಕೊಳ್ಳಲು ಹೈಡ್ರಾಮಾಪ್ರತಿಭಟನೆ ವೇಳೆ ಅಸಹಾಯಕ ಸ್ಥಿತಿಗೆ ಬೇಸತ್ತು ಅತಿಥಿ ಉಪನ್ಯಾಸಕರೊಬ್ಬರು ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿದರು. ನಮಗಿರುವ ದಾರಿ ಆತ್ಮಹತ್ಯೆಯೊಂದೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೂರದ ಜಿಲ್ಲೆಗಳಿಂದ ಬಂದವರು ಅಸ್ವಸ್ಥದೂರದ ಜಿಲ್ಲೆಗಳಿಂದ ಪ್ರತಿಭಟನೆಗೆ ಆಗಮಿಸಿದ್ದ ಮಹಿಳಾ ಅತಿಥಿ ಉಪನ್ಯಾಸಕರಲ್ಲಿ ಕೆಲವರು ಅಸ್ವಸ್ಥತೆಯಿಂದ ಬಳಲಿದರು. ಹತ್ತಿರದಲ್ಲಿ ಇದ್ದ ಪ್ರತಿಭಟನಾಕಾರರು ನೀರು ಕುಡಿಸಿ ಆರೈಕೆ ಮಾಡಿದರು. ಸಂಜೆಯ ಬಳಿಕ ತೋಂಟದಾರ್ಯ ಮಠದ‌ ಕೊಠಡಿಗಳಲ್ಲಿ ಅವರಿಗೆ ವಸತಿ- ಊಟೋಪಚಾರದ‌ ವ್ಯವಸ್ಥೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ