ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಸುಮಾರು 150 ಎಕರೆ ರೈತರ ಫಲವತ್ತಾದ ಭೂಮಿ ಹಾಳಾಗಿದ್ದು, ರೈತರ ಸಮಸ್ಯಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುಮಾರು 300 ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಕಳೆದ ಒಂದು ತಿಂಗಳ ಹಿಂದೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ರೈತರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮತ್ತೊಮ್ಮೆ ಮನವಿ ಸಲ್ಲಿಸಿ ಒಂದು ವಾರದೊಳಗಾಗಿ ಸಂಬಂಧಪಟ್ಟ ರೈತರು ಹಾಗೂ ಅಧಿಕಾರಿಗಳ ಸಭೆ ಕರೆದು ಪರಿಹಾರ ಕಂಡುಕೊಳ್ಳದಿದ್ದರೆ ಸಮಗ್ರ ರೈತರೆಲ್ಲರೂ ಕೂಡಿಕೊಂಡು ಲಕ್ಷ್ಮೇಶ್ವರ ಮುಖಾಂತರ ಹಾದು ಹೋಗುವ ಪಾಳಾ- ಬಾದಾಮಿ ರಾಜ್ಯ ಹೆದ್ದಾರಿ ತಡೆ ನಡೆಸಲಾಗುವದು ಎಂದು ಸಮಗ್ರ ರೈತ ಸಂಘಟನೆ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ
ಗದಗ: 2026- 27ನೇ ಸಾಲಿನ ಕ್ರೀಡಾ ಕಲ್ಯಾಣ ಯೋಜನೆಯಡಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ವಿವಿಧ ಯೋಜನೆ ಅಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಕ್ರೀಡಾ ವಿದ್ಯಾರ್ಥಿ ವೇತನ(2025-26) ಹಾಗೂ ಶೈಕ್ಷಣಿಕ ಶುಲ್ಕ ಮರುಪಾವತಿ(2026-27) ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅ. 31 ಕೊನೆಯ ದಿನ. ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಸಂಬಂಧಪಟ್ಟ ಆಸಕ್ತ ಕ್ರೀಡಾಪಟುಗಳು ಅರ್ಜಿಗಳನ್ನು ಅಧಿಕೃತ ಜಾಲತಾಣ https://sevasindhu.karnataka.gov.in ಮೂಲಕ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅ. 31ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಯುವ ಸಹಾಯವಾಣಿ 155265 ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.