ನಾಟಕ ಅರಿವು ಮೂಡಿಸುವ ಪ್ರಬಲ ಮಾಧ್ಯಮ: ಡಾ. ಕೆ.ವಿ. ನಾಗರಾಜಮೂರ್ತಿ

KannadaprabhaNewsNetwork |  
Published : Mar 31, 2026, 02:45 AM IST
ಸಿದ್ದಾಪುರ ತಾಲೂಕಿನ ವಾಜಗದ್ದೆಯಲ್ಲಿ ರಂಗಸೌಗಂಧ ಆಯೋಜಿಸಿದ ರಂಗೋತ್ಸವದ ಸಮಾರೋಪದಲ್ಲಿ ಡಾ. ಕೆ.ವಿ. ನಾಗರಾಜಮೂರ್ತಿ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದ ಜನರಿಗೆ ರಾಜಕಾರಣಿಗಳಿಂದ, ದೇವಸ್ಥಾನದ ಪೂಜಾರಿಗಳಿಂದ ಅರಿವು ಮೂಡಿಸಲು ಸಾಧ್ಯವಾಗುವುದಿಲ್ಲ.

ಜಿಲ್ಲಾ ರಂಗೋತ್ಸವದ ಸಮಾರೋಪದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಸಿದ್ದಾಪುರನಾಟಕಗಳು ಕೇವಲ ಮನರಂಜನೆಗೆ ಮಾತ್ರವಲ್ಲ. ರಂಗಭೂಮಿ ವ್ಯವಸ್ಥೆಯ ಕೆಟ್ಟತನವನ್ನು, ಸಮಾಜದಲ್ಲಿನ ಸಮಸ್ಯೆ ಎತ್ತಿ ತೋರಿಸುವ, ಜನವಿರೋಧಿ ನೀತಿಗಳ ವಿರುದ್ಧ ಎಚ್ಚರಿಸುವ, ಅರಿವು ಮೂಡಿಸುವ ಪ್ರಬಲ ಮಾಧ್ಯಮ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಹೇಳಿದರು.ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಸಭಾಭವನದಲ್ಲಿ ರಂಗಸೌಗಂಧದಿಂದ ಮೂರುದಿನಗಳ ಕಾಲ ಹುಲಿಮನೆ ಸೀತಾರಾಮಶಾಸ್ತ್ರಿಗಳ ಸ್ಮರಣೆಯಲ್ಲಿ ಅಯೋಜಿಸಿದ ಜಿಲ್ಲಾ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಜನರಿಗೆ ರಾಜಕಾರಣಿಗಳಿಂದ, ದೇವಸ್ಥಾನದ ಪೂಜಾರಿಗಳಿಂದ ಅರಿವು ಮೂಡಿಸಲು ಸಾಧ್ಯವಾಗುವುದಿಲ್ಲ. ಕಲೆ, ಸಾಹಿತ್ಯದಿಂದ ಅದು ಸಾಧ್ಯವಾಗುವ ಕಾರಣದಿಂದ ಮುಖ್ಯವಾಗುತ್ತದೆ. ಯುದ್ಧ ವ್ಯಾಮೋಹ, ಸಾಮ್ರಾಜ್ಯಶಾಹಿ ಧೋರಣೆ ವಿಜೃಂಭಿಸುತ್ತಿರುವ, ಮನುಷ್ಯ ಪ್ರೀತಿ ಕಳೆದುಹೋಗುತ್ತಿರುವ ಈ ಕಾಲದಲ್ಲಿ ರಂಗಭೂಮಿ ಜನರ ಸ್ವಾಸ್ಥ್ಯ, ಮಾನವೀಯತೆ, ಮನುಷ್ಯ ಸಂಸ್ಕೃತಿ ಬೆಳೆಸಲು ಮುಂದಾಗಬೇಕಿದೆ ಎಂದರು.

ಇಂದು ನಾಟಕ ಬರೆಯುವುದೇ ದೊಡ್ಡ ಸವಾಲಾಗಿದೆ. ಕುಗ್ರಾಮದಲ್ಲಿ ಹುಟ್ಟಿ ತನ್ನ ಅಂತಃಸತ್ವದಿಂದ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ರಂಗಭೂಮಿಯಲ್ಲಿ ಹೆಸರಾದ ಸೀತಾರಾಮಶಾಸ್ತ್ರಿಯವರು ವೈಚಾರಿಕ ದೃಷ್ಟಿಯಿಂದ, ಸಮಾಜವನ್ನು ಕಾಡುವ ಪಿಡುಗುಗಳ ಬಗ್ಗೆ ೭೫ ವರ್ಷಗಳ ಹಿಂದೆಯೇ ನಾಟಕಗಳನ್ನು ಬರೆದು ಪ್ರದರ್ಶಿಸಿದರು. ಬ್ರಿಟಿಷರ ವಿರುದ್ಧ ನಾಟಕ ಪ್ರದರ್ಶಿಸಿ ಅವರಿಂದ ನಿಷೇಧಕ್ಕೆ ಒಳಗಾದರು. ಮಹಿಳಾ ಶೋಷಣೆಯ ವಿರುದ್ಧದ ವರದಕ್ಷಿಣೆ ಎನ್ನುವ ಅವರ ನಾಟಕ ಜನಪ್ರಿಯತೆಗಳಿಸಿತ್ತು. ಕನ್ನಡ ರಂಗಭೂಮಿಗೆ ಮಹತ್ವದ ಕೊಡುಗೆ ಕೊಟ್ಟವರು ಸೀತಾರಾಮ ಶಾಸ್ತ್ರಿಗಳು. ಅಂಥ ಸಮಸ್ಯೆಗಳು ಇಂದೂ ಇವೆ. ಮಹಿಳೆಯರಿಗೆ ಈಗಲೂ ಕಷ್ಟಗಳಿವೆ. ಸಮಾಜ ಅನೇಕ ಬಗೆಯಿಂದ ಶಿಥಿಲಗೊಳ್ಳುತ್ತಿದೆ. ಅವುಗಳ ಕುರಿತು ಅರಿವುಮೂಡಿಸುವ, ಸಮಾಜದಲ್ಲಿ ಸೌಹಾರ್ದ ತರುವ ನಾಟಕಗಳು ರಚನೆಯಾಗಿ, ಪ್ರದರ್ಶನಗೊಳ್ಳುವ ಮೂಲಕ ಅರಿವು ಮೂಡಿಸಬೇಕು ಎಂದರು.ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ ,ನಮ್ಮೆಲ್ಲರಿಗೆ ಸಂಸ್ಕಾರ ಕೊಟ್ಟದ್ದು ಯಕ್ಷಗಾನ, ನಾಟಕ, ರಂಗಭೂಮಿ. ಕೃಷಿಕರಿಗೂ ಇಂಥ ಕಲೆಗಳಿಗೂ ಅವಿನಾಭಾವ ಸಂಬಂಧವಿದೆ. ಕೃಷಿಗೂ, ರಂಗಭೂಮಿಗೂ ಅನೇಕ ಸಾಮ್ಯತೆಯಿದೆ. ಆ ಕಾರಣಕ್ಕೆ ರಂಗದ ಜೊತೆ ಭೂಮಿ ಎನ್ನುವ ಪದ ಬಳಕೆಯಾಗಿರುವುದು. ಬೆಳೆ ಹೆಚ್ಚಾಗಲಿ ಎಂದು ಅತಿಯಾದ ರಾಸಾಯನಿಕವನ್ನು ಬಳಸಿದರೆ ಕೃಷಿಭೂಮಿ ಹೇಗೆ ಬರಡಾಗುತ್ತದೆಯೋ ಹಾಗೇ ಆಕರ್ಷಣೆಗಾಗಿ ರಂಗಭೂಮಿಯಲ್ಲಿ ಏನಾದರೂ ಬಳಸಿದರೆ ಅದರ ಫಲವತ್ತತೆ ಹಾಳಾಗುತ್ತದೆ. ರಂಗಭೂಮಿಯ ಸತ್ವವನ್ನು ಮುಂದಿನ ತಲೆಮಾರಿಗೂ ತಲುಪಿಸಿದರೆ ಜ್ಞಾನ, ಮಾನವೀಯತೆ ಹೆಚ್ಚುತ್ತದೆ ಎಂದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ ಮಾತನಾಡಿ, ರಂಗಭೂಮಿಯ ದಂತಕಥೆ ಸೀತಾರಾಮ ಶಾಸ್ತ್ರಿಗಳ ಕುರಿತು ಸರ್ಕಾರಗಳು ಹೆಚ್ಚಿನ ಗಮನ ವಹಿಸಿಲ್ಲದಿರುವುದು ಖೇದಕರ. ಪ್ರತಿ ವರ್ಷ ರಾಜ್ಯ ಸರ್ಕಾರದ ಮೂಲಕ ಶಾಸ್ತ್ರೀಯವರ ಹೆಸರಿನಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡಿದ ಹಿರಿಯರಿಗೆ ಪ್ರಶಸ್ತಿ ನೀಡುವುದು ಹಾಗೂ ನಾಟಕೋತ್ಸವ ನಡೆಸಲು ಮುಂದಾಗಬೇಕು ಎಂದರು.ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಅಧ್ಯಕ್ಷ ಗಣಪತಿಹೆಗಡೆ ಸೂಳಗಾರ ಮಾತನಾಡಿದರು.ರಂಗಸೌಗಂಧದ ಅಧ್ಯಕ್ಷ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ಶ್ರೀಪಾದ ಹೆಗಡೆ ಕೋಡನಮನೆ ನಿರೂಪಿಸಿ ವಂದಿಸಿದರು.ರಂಗಮಂದಿರ ಒದಗಿಸಲು ಪ್ರಯತ್ನ

ಸಮಾರೋಪ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೇಕ್ಷಕರೊಬ್ಬರು ರಂಗತಂಡಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೀತಾರಾಮ ಶಾಸ್ತ್ರಿಗಳ ಹುಟ್ಟೂರಾದ ಸಿದ್ದಾಪುರದಲ್ಲಿ ರಂಗಮಂದಿರ ನಿರ್ಮಿಸಬೇಕು ಎಂದು ಕೋರಿದರು.

ಡಾ.ಕೆ.ವಿ. ನಾಗರಾಜಮೂರ್ತಿ ಸ್ಪಷ್ಟನೆ ನೀಡಿ ಕರ್ನಾಟಕ ನಾಟಕ ಅಕಾಡೆಮಿಯ ವ್ಯಾಪ್ತಿ ಚಿಕ್ಕದು. ನೀವು ಉತ್ತಮವಾದ ಜಾಗವನ್ನು ಗುರುತಿಸಿದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ರಂಗಮಂದಿರ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನಕ್ಕೆ ಶಕ್ತಿ, ಪ್ರೋತ್ಸಾಹ ನೀಡುವ ನಾಟಕ
ಬದುಕಿನ ಪಾವಿತ್ರ್ಯ ಕಾಪಾಡಲು ಅಧ್ಯಾತ್ಮ ಅವಶ್ಯ: ಡಾ. ಕರಿಬಸವ ರಾಜೇಂದ್ರ ಶ್ರೀಗಳು