ಉತ್ತಮ ಸಮಾಜ ನಿರ್ಮಾಣಕ್ಕೆ ನಾಟಕಗಳು ಸಹಕಾರಿ

KannadaprabhaNewsNetwork | Published : Mar 15, 2025 1:02 AM

ಸಾರಾಂಶ

ಸೊರಬ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಮನರಂಜನೆ ನೀಡುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಅತ್ಯಂತ ಸಹಕಾರಿಯಾಗಿವೆ ಎಂದು ಕುಪ್ಪಗಡ್ಡೆ ಗ್ರಾ.ಪಂ. ಅಧ್ಯಕ್ಷ ನೂರ್ ಅಹಮದ್ ಹೇಳಿದರು.

ಸೊರಬ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಮನರಂಜನೆ ನೀಡುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಅತ್ಯಂತ ಸಹಕಾರಿಯಾಗಿವೆ ಎಂದು ಕುಪ್ಪಗಡ್ಡೆ ಗ್ರಾ.ಪಂ. ಅಧ್ಯಕ್ಷ ನೂರ್ ಅಹಮದ್ ಹೇಳಿದರು.ತಾಲೂಕಿನ ಯಕ್ಷಿ ಗ್ರಾಮದಲ್ಲಿ ಶ್ರೀ ಹುಲೇಶ್ವರ ಮಹಾಸ್ವಾಮಿಯ ೫ನೇ ವಾರ್ಷಿಕೋತ್ಸವ ಅಂಗವಾಗಿ ಊರಿನ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಇಂದಿಗೂ ಭಕ್ತಿ ಮತ್ತು ಭಾವನೆಯ ಸಂಕೇತವಾಗಿವೆ. ಸಮಾಜದ ಬದಲಾವಣೆ, ಪರಿವರ್ತನೆ ಮಾಡಲು ಇಂತಹ ನಾಟಕಗಳು ಸಹಕಾರಿಯಾಗಿವೆ. ಗ್ರಾಮಾಂತರ ಭಾಗಗಳಲ್ಲಿ ನಡೆಯುವ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪಟ್ಟಣ ಪ್ರದೇಶಗಳಲ್ಲಿಯೂ ಸಹ ನಡೆಯಬೇಕು ಎಂದ ಅವರು, ಇಂತಹ ನಾಟಕಗಳನ್ನು ಆಯೋಜಿಸುವುದರಿಂದ ಸ್ಥಳೀಯ ಕಲಾವಿದರಿಗೆ ತಮ್ಮ ಕಲೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ತಾಲೂಕಿನಲ್ಲಿ ಸುಗ್ಗಿಯ ಕಾಲದಲ್ಲಿ ಕಲೆ, ಸಾಹಿತ್ಯ, ನಾಟಕ, ಬಯಲಾಟ, ಸಂಗೀತ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿರುವುದರಿಂದ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುವಲ್ಲಿ ಸಹಕಾರಿಯಾಗಿದೆ ಎಂದರು.ಓ.ಬಿ.ರಾಜಶೇಖರ ಕಲೆಯ ಬಗ್ಗೆ ಮಾತನಾಡಿ, ಯಕ್ಷಗಾನ ಹಾಗೂ ತಾಳಮದ್ದಲೆ ಸಾಹಿತ್ಯದ ತಾಯಿಯಾದರೆ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಜನಸಾಮಾನ್ಯರಿಗೆ ಮನಮುಟ್ಟುವಂತೆ ಅನೇಕ ಹಿತದಾಯಕ ವಿಚಾರಗಳನ್ನು ಪ್ರಚುರ ಪಡಿಸುತ್ತವೆ. ರಾಮಾಯಣ ಮಹಾಭಾರತದಂತಹ ಅನೇಕ ಕೃತಿಗಳ ಸಾರವನ್ನು ಸಂಭಾಷಣೆಗಳ ಮೂಲಕ, ಸಂಗೀತ, ಕಲೆ ಸಾಹಿತ್ಯದ ಮೂಲಕ ಬದುಕಿನ ಬಾಂಧವ್ಯವನ್ನು ಬೆಳೆಸುವ ಪ್ರಮುಖ ಮಾಧ್ಯಮವಿದು. ಇಂತಹ ಕಲೆ ಸಾಹಿತ್ಯ ಗೇಯ, ಗಾಯನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನ ಸಾಮಾನ್ಯರು ಮುಂದಾಗಬೇಕು ಎಂದು ಹೇಳಿದರು.ಇದೇ ವೇಳೆ ನಾಟಕ ನಿರ್ದೇಶಕ ಎಂ.ಎಚ್.ಶಿವಪ್ಪ ಮಾಳೇಕೊಪ್ಪ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ನಂತರ ಶ್ರೀ ಕಲ್ಲೇಶ್ವರ ಕಲಾ ನಾಟ್ಯ ಸಂಘ ಯಕ್ಷಿ ಇವರಿಂದ ಸೋಲಿಲ್ಲದ ಸಿಂಧೂರ ಅರ್ಥಾತ್ ರಣರಂಗದಲ್ಲಿ ರಕ್ತದೋಕುಳಿ ಎಂಬ ರೌದ್ರಮಯ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮಮತಾ ರೇವಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಗುರುಭಟ್ ಕುಪ್ಪಗಡ್ಡೆ, ಡಾ.ಭೀಮಪ್ಪ ಕುಪ್ಪಗಡ್ಡೆ, ವಿಎಸ್‌ಎಸ್‌ಎನ್ ಅಧ್ಯಕ್ಷ ಶೇಖರಪ್ಪ, ಲೋಕಮ್ಮ, ಗೂರನ ಬಂಗಾರಪ್ಪ, ಎಚ್.ಪರಶುರಾಮ, ಕೆ.ಆರ್.ಗೋಪಾಲ, ಯುವರಾಜ್ ಕೆರೆಕೊಪ್ಪ, ಪುರುಷೋತ್ತಮ, ಆನಂದಪ್ಪ ಕುಪ್ಪಗಡ್ಡೆ, ಉಪನ್ಯಾಸಕ ಉಮೇಶ್ ಭದ್ರಾಪುರ, ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಕೆ.ಆರ್.ಬಸಪ್ಪ ಮೊದಲಾದವರು ಹಾಜರಿದ್ದರು.

Share this article