ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ:ಮಕ್ಕಳಲ್ಲಿನ ಕಲ್ಪನೆಗಳಿಗೆ ಬಣ್ಣದ ರೂಪ ಕೊಟ್ಟು, ಆಲೋಚನೆಗಳನ್ನು ತುಂಬುವ ಚಿತ್ರಕಲಾ ಸ್ಪರ್ಧೆಯನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸತತ 8ನೇ ವರ್ಷ ಹುಬ್ಬಳ್ಳಿಯಲ್ಲಿ ಆಯೋಜಿಸಿತು. ಈ ಸ್ಪರ್ಧೆಗೆ ವಿವಿಧ ಶಾಲೆಗಳಿಂದ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶಿಸಿದರು.
ಮಕ್ಕಳ ಮನಸ್ಸಿನಲ್ಲಿರುವ ಕಲ್ಪನೆಗಳಿಗೆ ಬಣ್ಣದ ರೂಪ ನೀಡುವ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸತತವಾಗಿ ಕಳೆದ ಎಂಟು ವರ್ಷಗಳಿಂದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಆಯೋಜಿಸುತ್ತಿರುವ ಚಿತ್ರಕಲಾ ಸ್ಪರ್ಧೆಯು ಸಂಪೂರ್ಣ ಯಶಸ್ವಿಯಾಯಿತು. ಬೆಳಗ್ಗೆಯಿಂದಲೇ ಗಾಜಿನ ಮನೆಯ ಆವರಣ ಮಕ್ಕಳ ಕಲರವದಿಂದ ಕಳೆಗಟ್ಟಿತ್ತು. ಕೈಯಲ್ಲಿ ಬಣ್ಣದ ಪೆನ್ಸಿಲ್, ಕುಂಚ, ಬಣ್ಣದ ಡಬ್ಬಿ, ಬ್ರಶ್ ಹಿಡಿದ ವಿದ್ಯಾರ್ಥಿಗಳ ಮುಖದಲ್ಲಿ ಸ್ಪರ್ಧೆಯ ಉತ್ಸಾಹ ಎದ್ದು ಕಾಣುತ್ತಿತ್ತು. ಪ್ರತಿಯೊಬ್ಬರಲ್ಲೂ, ನಾನು ಈ ಸ್ಪರ್ಧೆಯಲ್ಲಿ ಉತ್ತಮವಾಗಿ ಚಿತ್ರ ಬಿಡಿಸಿ ಪ್ರಥಮ ಬಹುಮಾನವಾದ ಸೈಕಲ್ ಪಡೆಯುತ್ತೇನೆಂಬ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ, ಇಡೀ ಪರಿಸರವೇ ಬಣ್ಣಗಳ ಲೋಕವಾಗಿ ಕಂಗೊಳಿಸಿತು.ಪ್ರತಿ ತರಗತಿಗೆ ಪ್ರತ್ಯೇಕ ವಿಷಯ:
ಪ್ರತಿ ತರಗತಿಗೆ ಪ್ರತ್ಯೇಕ ವಿಷಯ ನೀಡಿ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳ ವಯಸ್ಸು, ಗ್ರಹಿಕೆ ಹಾಗೂ ಚಿತ್ರಕಲಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. 8ನೇ ತರಗತಿ ವಿದ್ಯಾರ್ಥಿಗಳಿಗೆ ಹಸಿರು ಜೀವನ, 9ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ, 10ನೇ ತರಗತಿ ವಿದ್ಯಾರ್ಥಿಗಳಿಗೆ ಬರಗಾಲದ ತೀವ್ರತೆ ವಿಷಯಗಳು ಮಕ್ಕಳ ಕುಂಚದಲ್ಲಿ ಜೀವಂತಿಕೆ ಪಡೆದವು.8 ವರ್ಷಗಳ ಕಲಾ ಅಭಿಯಾನ:ಮಕ್ಕಳ ದಿನಾಚರಣೆಯ ಸಂಭ್ರಮಕ್ಕೆ ಬಣ್ಣದ ಮೆರುಗು ನೀಡಿದ ಕನ್ನಡಪ್ರಭದ ಈ ಪ್ರಯತ್ನ, ಎಂಟು ವರ್ಷಗಳ ಪಯಣದೊಂದಿಗೆ ಮತ್ತಷ್ಟು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದೆ. ಸ್ಪರ್ಧೆಯ ಬಹುಮಾನಕ್ಕಿಂತಲೂ ಭಾಗವಹಿಸುವ ಅವಕಾಶ, ತಮ್ಮ ಕಲ್ಪನೆಗೆ ರೂಪ ನೀಡಿದ ಸಂತಸವೇ ಮಕ್ಕಳ ಪಾಲಿಗೆ ದೊಡ್ಡ ಸಂಭ್ರಮವಾಗಿತ್ತು ಎಂಬುದು ವಿಜೇತ ಮಕ್ಕಳ ಮಂದಹಾಸದಲ್ಲಿ ಕಾಣುತ್ತಿತ್ತು. ಪ್ರತಿ ತರಗತಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ, ನಗದು ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.