ಹೊಸ ಜೀವನವನ್ನು ನಡೆಸಬೇಕು ಎನ್ನುವ ಪರಿಕಲ್ಪನೆಯೊಂದಿಗೆ ನಡೆಸುತ್ತಿರುವ ಮದ್ಯವರ್ಜನ ಕಾರ್ಯಕ್ರಮ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ.
ಸಿದ್ದಾಪುರ: ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ಧರ್ಮಸ್ಥಳದ ಧರ್ಮಾದಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಾಕಾರಗೊಳಿಸುತ್ತಿದ್ದು, ಇದು ಸಮಾಜದ ಅಭಿವೃದ್ಧಿಗೆ ಪ್ರೇರಣೆಯಾಗಿದೆ ಎಂದು ಬಿಇಒ ಎಂ.ಎಚ್. ನಾಯ್ಕ ತಿಳಿಸಿದರು.ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಿದ್ದಾಪುರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆಯವರು ಆಯೋಜಿಸಿದ್ದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿ, ನಮಗೆ ಬೇಡವಾದದ್ದನ್ನು ತ್ಯಾಗ ಮಾಡಬೇಕು. ಮದ್ಯಮುಕ್ತ ಗ್ರಾಮ ನಮ್ಮದಾಗಬೇಕು. ಹೊಸ ಜೀವನವನ್ನು ನಡೆಸಬೇಕು ಎನ್ನುವ ಪರಿಕಲ್ಪನೆಯೊಂದಿಗೆ ನಡೆಸುತ್ತಿರುವ ಮದ್ಯವರ್ಜನ ಕಾರ್ಯಕ್ರಮ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ಮದ್ಯ ಸೇವನೆಯಿಂದ ಮನುಷ್ಯನ ದೇಹವನ್ನು ಮಾತ್ರ ಸುಡುವುದಲ್ಲ. ವ್ಯಕ್ತಿತ್ವವನ್ನು ಸುಡುತ್ತದೆ. ವೀರೇಂದ್ರ ಹೆಗ್ಗಡೆ ಅವರು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕೆನ್ನುವುದರಿಂದ ಅನೇಕ ಕಾರ್ಯಕ್ರಮ ಜಾರಿಗೊಳಿಸುತ್ತಿದ್ದು, ಅದು ಸಫಲವಾಗುತ್ತಿರುವುದು ಸಹ ಗ್ರಾಮೀಣಾಭಿವೃದ್ಧಿಗೆ ಅನುಕೂಲವಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಸ ನಾಯ್ಕ ಅವರು, ಮದ್ಯವರ್ಜನ ಶಿಬಿರಗಳಿಂದ ಜನತೆ ಪ್ರೇರಣೆಗೊಂಡು ಪರಿವರ್ತನೆ ಆಗಿದ್ದಾರೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಮು ಕಿಣಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜು, ಉಪಾಧ್ಯಕ್ಷೆ ಗೌರಿ ನಾಯ್ಕ, ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿವೇಕ್ ರಾಯ್ಕರ್, ರಮೇಶ ಹಾರ್ಸಿಮನೆ, ಗುರುರಾಜ ಶಾನಭಾಗ, ಲಕ್ಷ್ಮಿರಾಜು, ಶಂಕರ ಭಟ್ಟ, ಗಣಪತಿ ಗೌಡ, ಭರಮಪ್ಪ ಗೌಡ, ಶೌರ್ಯ ತಂಡದ ಚಂದ್ರಶೇಖರ, ಮಂಜುನಾಥ ಇತರರಿದ್ದರು.ಇದೇ ಸಂದರ್ಭದಲ್ಲಿ ಜನಜಾಗೃತಿ ಅಣ್ಣಾ ರಮೇಶ ಗೌಡ ಅವರಿಗೆ ಹಾಗೂ ಜನಜಾಗೃತಿ ಮಿತ್ರ ಪ್ರಮಾಣಪತ್ರವನ್ನು ನರಸಿಂಹ ಗೌಡ ಹಾಗೂ ವಂಕಟೇಶ ಗೌಡ ಅವರಿಗೆ ನೀಡಲಾಯಿತು. ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ. ಸ್ವಾಗತಿಸಿದರು. ಶಿರಸಿ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಸಮಾವೇಶದ ಹಕ್ಕೊತ್ತಾಯ ಮಂಡಿಸಿದರು. ಯಲ್ಲಾಪುರ ತಾಲೂಕು ಯೋಜನಾಧಿಕಾರಿ ಹನುಮಂತ ಗೌಡ ವಂದಿಸಿದರು. ಉದಯ ಹಾಗೂ ಲಲಿತಾ ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಸಹಕರಿಸಿದರು. ಇದಕ್ಕೂ ಪೂರ್ವದಲ್ಲಿ ಪಟ್ಟಣದ ನೆಹರು ಮೈದಾನದಿಂದ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾ ಪ್ರಾರಂಭಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.