ಶಿವಕುಮಾರ ಕುಷ್ಟಗಿ ಗದಗ
ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿದ್ದು, ಅಧಿಕಾರಿಗಳು ಪೂರೈಕೆ ಮಾಡುವ ಟ್ಯಾಂಕರ್ ನೀರನ್ನೇ ಆಶ್ರಯಿಸಿದ್ದಾರೆ. ಆದರೆ ಕೊಡ ನೀರು ಪಡೆಯಲು ನಾಲ್ಕಾರು ಜನರೊಂದಿಗೆ ಕಿತ್ತಾಡಬೇಕು. ಅದು ಕೂಡಾ ಫ್ಲೋರೈಡ್‌ಯುಕ್ತ ನೀರು.ಈ ಗ್ರಾಮದಲ್ಲಿ ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ತಲೆಮಾರುಗಳಿಂದಲೇ ಇಲ್ಲಿನ ಜನರು ಕುಡಿಯುವ ನೀರಿಗೆ ಆಶ್ರಯಿಸಿರುವುದು ಗ್ರಾಮದ ಕೆರೆ. ಪ್ರತಿ ವರ್ಷವೂ ಉತ್ತಮವಾದ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಹೇರಳವಾದ ನೀರು ಲಭ್ಯವಿರುತ್ತಿತ್ತು. ಇದರಿಂದ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಕಳೆದ ಸಾಲಿನ ಬರಗಾಲ ಈಗ ಗ್ರಾಮದಲ್ಲಿ ಕುಡಿಯುವ ಹನಿ ನೀರಿಗೂ ಪರದಾಡುವಂತೆ ಮಾಡಿದೆ.
ಟ್ಯಾಂಕರ್ ನೀರಲ್ಲೂ ಫ್ಲೋರೈಡ್: ಈ ಹಿಂದೆ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ನದಿಯಲ್ಲಿ ನೀರು ಸಂಪೂರ್ಣ ಖಾಲಿಯಾದ ಹಿನ್ನೆಲೆಯಲ್ಲಿ ಪಕ್ಕದ ಹರ್ಲಾಪುರ ಗ್ರಾಮದ ವ್ಯಾಪ್ತಿಯ ಕೊಳವೆಬಾವಿ, ಇನ್ನೊಂದು ಪಕ್ಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಮ ವ್ಯಾಪ್ತಿಯಲ್ಲಿನ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಿ ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ. ಆದರೆ ಯರೇಹಂಚಿನಾಳ ಗ್ರಾಮದಿಂದ ಪೂರೈಕೆಯಾಗುವ ನೀರು ಸಾಕಷ್ಟು ಕ್ಷಾರಯುಕ್ತವಾಗಿದೆ. ಕುಡಿಯಲು ಅಲ್ಲ, ಬಳಸಲು ಕೂಡಾ ಯೋಗ್ಯವಾಗಿಲ್ಲ. ಅದೇ ನೀರನ್ನು ಅಧಿಕಾರಿಗಳು ಪೂರೈಕೆ ಮಾಡುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.ತಳ ಮುಟ್ಟಿದ ಕೆರೆ ನೀರು: ಟ್ಯಾಂಕರ್ ಮೂಲಕ ಪೂರೈಕೆ ಮಾಡುತ್ತಿರುವ ನೀರು ಫ್ಲೋರೈಡ್‌ಯುಕ್ತವಾಗಿದೆ. ಅಡುಗೆ ಮಾಡಲು ಬರುತ್ತಿಲ್ಲ. ಆಹಾರ ಧಾನ್ಯಗಳೇ ಕುದಿಯುವುದಿಲ್ಲ. ಅನಿವಾರ್ಯವಾಗಿ ನಾವು ಮತ್ತೆ ಕೆರೆಯ ನೀರನ್ನೇ ಬಳಕೆ ಮಾಡಬೇಕಾಗಿದೆ. ಆದರೆ ಕೆರೆಯ ನೀರು ತಳಸೇರಿದೆ. ನೀರು ತುಂಬಿದರೆ ಸಾಕು, ಕೊಡದಲ್ಲಿ ಅರ್ಧದಷ್ಟು ಕೆಸರು ಬರುತ್ತದೆ. ಸದ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ಯಾಂಕರ್ ಫ್ಲೋರೈಡ್ ನೀರು, ಇಲ್ಲವೇ ಕೆರೆಯಲ್ಲಿನ ಕೆಸರು ಮಿಶ್ರಿತ ನೀರೇ ಗ್ರಾಮಸ್ಥರಿಗೆ ಅನಿವಾರ್ಯವಾಗಿ ಮಾರ್ಪಟ್ಟಿದೆ.
ಕೊಡ ನೀರಿಗಾಗಿ ಕಾದಾಟ: ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಟ್ಯಾಂಕರ್ ಪೂರೈಕೆಯನ್ನಾದರೂ ಹೆಚ್ಚಿಸಬೇಕು. ಆದರೆ ಅದನ್ನು ಮಾಡದೇ ಇರುವುದರಿಂದ ಓಣಿಗೊಮ್ಮೆ ಬರುವ ಟ್ಯಾಂಕರ್‌ನಲ್ಲಿ ಕೊಡ ನೀರು ಪಡೆಯಬೇಕಾದಲ್ಲಿ ಪ್ರಯಾಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿತ್ಯವೂ ಪರಸ್ಪರ ಜಗಳ, ಕಾದಾಟಗಳು ನೀರಿನ ಟ್ಯಾಂಕರ್ ಬಳಿ ನಡೆಯುವುದು ತಿಮ್ಮಾಪುರ ಗ್ರಾಮದಲ್ಲಿ ಸಾಮಾನ್ಯ.ತಿಮ್ಮಾಪುರ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರು ಬರುತ್ತಿಲ್ಲ. ಈಗ ಟ್ಯಾಂಕರ್ ಮೂಲಕ ಫ್ಲೋರೈಡ್‌ಯುಕ್ತ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಮಹಿಳೆಯರು ನೀರಿಗಾಗಿ ನಿತ್ಯವೂ ಜಗಳ ಮಾಡುತ್ತಿದ್ದು, ಈ ನೀರನ್ನು ಕುಡಿಯುವುದರಿಂದ ವಾಂತಿ-ಭೇದಿ, ಕಾಲರಾ ಹರಡುವ ಸಾಧ್ಯತೆ ದಟ್ಟವಾಗಿವೆ. ಆದರೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಕೂಡಲೇ ಗಮನ ಹರಿಸಬೇಕು ಎಂದು ತಿಮ್ಮಾಪುರ ಗ್ರಾಮದ ಮುಖಂಡ ಯಲ್ಲಪ್ಪ ಬಾಬರಿ ಹೇಳಿದರು.
ಕರೆ ಸ್ವೀಕರಿಸದ ಪಿಡಿಒ: ತಿಮ್ಮಾಪುರ ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆ ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಗಾಗಿ ಪಿಡಿಒ ಅವರನ್ನು ಹಲವಾರು ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.ಟ್ಯಾಂಕರ್ ಮೂಲಕ ಪೂರೈಕೆ ಮಾಡುವ ನೀರನ್ನು ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ತಪಾಸಣೆ ನಡೆಸದೇ ಯಾವುದೇ ನೀರನ್ನು ನಾವು ಪೂರೈಕೆ ಮಾಡುವುದಿಲ್ಲ. ನಮ್ಮ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತಾರೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.