ಪಾಲಾಕ್ಷಿ ಬಿ. ತಿಪ್ಪಳ್ಳಿ ಯಲಬುರ್ಗಾ
ಜೆಜೆಎಂ ಕಾಮಗಾರಿ ಕಳಪೆ ಮತ್ತು ನಿರ್ವಹಣೆ ಲೋಪದಿಂದ ಕೆಲ ಕಡೆ ನೀರು ಸರಬರಾಜು ಮಾಡುವಲ್ಲಿ ಅನೇಕ ತೊಂದರೆ ಕಂಡು ಬರುತ್ತಿವೆ. ಇನ್ನೂ ನಾನಾ ಕಡೆ ಸಮರ್ಪಕ ಪೈಪ್‌ಲೈನ್ ಜೋಡಣೆಯಾಗದ ಕಾರಣ ನೀರು ಪೂರೈಕೆ ಆಗದಿರುವ ನಿದರ್ಶನ ಕಣ್ಣಿಗೆ ಕಾಣುತ್ತಿವೆ. ಅಲ್ಲದೆ ಸರಿಯಾದ ನಲ್ಲಿ ಜೋಡಣೆ ಇಲ್ಲದಿರುವುದು, ಕೆಲ ಕಡೆ ಕಿತ್ತಿರುವುದು ಕಾಣಬಹುದು. ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ನೀರನ್ನು ಜಲಜೀವನ್ ಮಿಷನ್ ಯೋಜನೆಯಡಿ ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಕಳಪೆಯ ಕೂಗು ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
೩೧೭ ಬೋರ್‌ವೆಲ್ ಸುಸ್ಥಿತಿ: ಯಲಬುರ್ಗಾ ತಾಲೂಕು ವ್ಯಾಪ್ತಿಗೆ ೯೭ಗ್ರಾಮಗಳ ಪೈಕಿ ೨೨ಗ್ರಾಪಂಗಳ ಒಟ್ಟು ೩೧೭ ಸರ್ಕಾರಿ ಬೋರ್‌ವೆಲ್ ಸುಸ್ಥಿತಿಯಲ್ಲಿವೆ. ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ೫೩ ಖಾಸಗಿ ಬೋರ್‌ವೆಲ್ ಗುರುತಿಸಲಾಗಿದೆ. ಕುಡಿವ ನೀರಿನ ಮೂಲ ಸ್ವಚ್ಛಗೊಳಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ೧೪೭ ಓವರ್ ಹೆಡ್ ಟ್ಯಾಂಕ್, ೧೩೪ ಸಿಸ್ಟನ್, ೮ ಸಂಪುಗಳ ನೀರನ್ನು ಎಫ್‌ಟಿ ಕಿಟ್ ಬಳಸಿ ಪರೀಕ್ಷೆ ಮಾಡಲಾಗುತ್ತಿದೆ.ಡಿಬಿಒಟಿ ಯೋಜನೆ ಅನುಷ್ಠಾನ: ಶಾಸಕ ಬಸವರಾಜ ರಾಯರಡ್ಡಿ ಈ ಹಿಂದೆ ಉನ್ನತ ಶಿಕ್ಷಣ ಮಂತ್ರಿ ಇದ್ದಾಗ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕು ವ್ಯಾಪ್ತಿಯ ೩೫೯ ಗ್ರಾಮಗಳಿಗೆ ₹೭೬೩ ಕೋಟಿ ಅನುದಾನದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಘೋಷಣೆಯಾದ್ದರಿಂದ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದ ಪರಿತಾಪ ಕೊಂಚ ಮಟ್ಟಿಗೆ ತಪ್ಪಿದೆ. ಇದು ೬.೬೨ ಲಕ್ಷ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ದಿನಕ್ಕೆ ತಲಾ ೮೮ ಲೀಟರ್ ಪ್ರಮಾಣದ ನೀರು ಪೂರೈಸುವ ಡಿಬಿಒಟಿ ಮಾದರಿಯಲ್ಲಿ ಶುದ್ಧ ನೀರು ಪೂರೈಸುವ ಯೋಜನೆಯಾಗಿದೆ. ಕ್ಷೇತ್ರದಲ್ಲಿ ಈ ಯೋಜನೆ ಮಂಜೂರಾದ ಹಿನ್ನೆಲೆಯಲ್ಲಿ ಸದ್ಯ ತಾಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇಲ್ಲ.
ದುರಸ್ತಿಗೆ ಕಾದಿರುವ ಆರ್‌ಒ ಪ್ಲಾಂಟ್: ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಡಿಬಿಒಟಿ ಮೂಲಕ ಪೂರೈಕೆಯಾಗದ ಕೆಲ ಗ್ರಾಮಗಳಲ್ಲಿ ಸಾರ್ವಜನಿಕರು ಪ್ಲೊರೈಡ್‌ಯುಕ್ತ ನೀರನ್ನೇ ಸೇವಿಸುವಂತಾಗಿದೆ. ಶುದ್ಧ ಕುಡಿವ ನೀರಿಗಾಗಿ ಪಕ್ಕದ ಗ್ರಾಮ ಅವಲಂಬಿಸಿದ್ದಾರೆ. ಅಲ್ಲದೆ ಖಾಸಗಿ ಆರ್‌ಒ ಪ್ಲಾಂಟ್‌ಗಳ ಮೊರೆ ಹೋಗಬೇಕಿದೆ. ೧೭೦ ಆರ್‌ಒ ಪ್ಲಾಂಟ್‌ಗಳ ಪೈಕಿ ೧೧೯ ಪ್ಲಾಂಟ್‌ಗಳು ಗ್ರಾಪಂಗೆ ಹಸ್ತಾಂತರಗೊಂಡಿವೆ. ಬಾಕಿ ಇರುವ ೫೧ ಪ್ಲಾಂಟ್‌ಗಳ ದುರಸ್ತಿ ಕಾರ್ಯ ನಡೆದಿದೆ. ವಾಸ್ತವವಾಗಿ ಆರ್‌ಒ ಪ್ಲಾಂಟ್‌ಗಳ ನಿರ್ವಹಣೆ ಬಹುತೇಕ ಕಡೆಗಳಲ್ಲಿ ನಡೆಯುತ್ತಿಲ್ಲ.
ಬೇಸಿಗೆಯಲ್ಲಿ ತಾಲೂಕಿನ ಜನರಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಈ ಕುರಿತು ಸಭೆ ನಡೆಸಲಾಗಿದೆ. ಇನ್ನು ಕೆಲ ಕಡೆ ಪ್ರಗತಿಯಲ್ಲಿರುವ ಜೆಜೆಎಂ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಮಗಾರಿ ವಿಳಂಬ ಮಾಡಿದರೆ ನೋಟಿಸ್ ನೀಡಿ,ಬ್ಲಾಕ್ ಲಿಸ್ಟ್‌ಗೆ ಸೇರಿಸುವುದಾಗಿ ಗುತ್ತಿಗೆದಾರರಿಗೆ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಆರ್‌ಡಬ್ಲುಎಸ್ ಇಲಾಖೆ ಎಇಇ ಸಾಯಬಣ್ಣ ತಿಳಿಸಿದ್ದಾರೆ.