ಶಿವಕುಮಾರ ಕುಷ್ಟಗಿ
ಮುಂಡರಗಿ ತಾಲೂಕಿನ ಹಮ್ಮಿಗಿ ಜಾಕ್ ವೆಲ್‌ನಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸಲು 130 ಕೋಟಿಗೂ ಅಧಿಕ ವೆಚ್ಚದಲ್ಲಿ 2014ರಲ್ಲಿಯೇ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ₹ 89 ಕೋಟಿ ವೆಚ್ಚದಲ್ಲಿ ಅವಳಿ ನಗರದಲ್ಲಿ ನೀರು ಪೂರೈಕೆಯ ಹೊಸ ಪೈಪ್ ಲೈನ್ ಅಳವಡಿಕೆ, ₹ 23 ಕೋಟಿ ವೆಚ್ಚದಲ್ಲಿ ಜಾಕ್‌ವೆಲ್‌ನಿಂದ ಬಿಡಬ್ಲ್ಯೂಎಸ್ಸಿ ಪೈಪ್ ಅಳವಡಿಕೆ ಹಾಗೂ ₹ 18 ಕೋಟಿ ವೆಚ್ಚದಲ್ಲಿ ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಿ, ಅವಳಿ ನಗರದ ಜನತೆಗೆ ನೀರು ಕೊಡಬೇಕಿತ್ತು.
12 ಜೋನ್‌ಗಳಾಗಿ ವರ್ಗಾವಣೆ:ಗದಗ ಬೆಟಗೇರಿ 35 ವಾರ್ಡ್‌ಗಳಲ್ಲಿನ ಮನೆಗಳಿಗೆ ನೀರು ಪೂರೈಕೆ ಮಾಡಲು 12 ಜೋನ್‌ಗಳನ್ನಾಗಿ ವಿಂಗಡಿಸಲಾಗಿತ್ತು. ಇದಿಷ್ಟೇ ಜೋನ್‌ಗಳಿಂದ ನೀರು ಪೂರೈಕೆ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಮತ್ತೆರಡು ಜೋನ್‌ಗಳನ್ನು ಪ್ರಾರಂಭಿಸಿ ಒಟ್ಟು 14 ಜೋನ್‌ಗಳ ಮೂಲಕ ಅವಳಿ ನಗರದಲ್ಲಿ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿ ಪ್ರಾರಂಭಿಸಲಾಗಿದೆ.2017ರಲ್ಲಿಯೇ ಉದ್ಘಾಟನೆ: ಯೋಜನೆ ಪೂರ್ಣಗೊಳ್ಳುವ ಪೂರ್ವದಲ್ಲಿಯೇ 2017ರಲ್ಲಿಯೇ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಯೋಜನೆ ಕುಂಟುತ್ತಲೇ ಸಾಗಿದೆ. ಇಂದಿಗೂ ಅವಳಿ ನಗರದ ಜನತೆಗೆ 24/7 ನಿರಂತರ ನೀರು ಅಲ್ಲ, ತಿಂಗಳಿಗೊಮ್ಮೆ ಕೂಡಾ ನೀರು ಸಿಗುತ್ತಿಲ್ಲ.
ಇನ್ನು ನಿರ್ಮಾಣ ಮುಗಿದಿಲ್ಲ:24/7 ನೀರು ಪೂರೈಕೆ ಯೋಜನೆಗೆ ಅನುಕೂಲವಾಗಲೆಂದು ಹೊಸದಾಗಿ 5 ಓವರ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ವಿಚಿತ್ರವೆಂದರೆ 2014ರಲ್ಲಿ ಪ್ರಾರಂಭವಾಗಿರುವ ಓವರ್ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದವರು ಇದುವರೆಗೂ ಪೂರ್ಣಗೊಳಿಸಿಲ್ಲ. ಅರ್ಧಕ್ಕೆ ನಿಂತಿದ್ದ ಮೂರು ಓವರ್ ಹೆಡ್ ಟ್ಯಾಂಕ್ ಗಳನ್ನು ನಗರಸಭೆಯವರೇ ಪೂರ್ಣಗೊಳಿಸಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಭಾಪೂರ ರಸ್ತೆಯಲ್ಲಿನ ಟ್ಯಾಂಕ್ ಇಂದಿಗೂ ನಿರ್ಮಾಣ ಹಂತದಲ್ಲಿಯೇ ಉಳಿದಿರುವುದು ವಿಚಿತ್ರವಾದರೂ ನಂಬಲೇ ಬೇಕಾದ ಸಂಗತಿಯಾಗಿದೆ.
ಅವಳಿ ನಗರದ ಕುಡಿವ ನೀರಿನ ಯೋಜನೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಸಮರ್ಪಕ ಕುಡಿವ ನೀರು ಪೂರೈಕೆ ಮಾಡಲಾಗುವುದು. ಇದಕ್ಕಾಗಿ 90 ದಿನಗಳ ಸ್ಪೆಶೆಲ್ ಡ್ರೈವ್ ಮಾಡುತ್ತೇವೆ ಎಂದು ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಅದನ್ನು ಕೇವಲ ಅಧಿಕಾರಿಗಳ ಸಭೆಗೆ ಸೀಮಿತಗೊಳಿಸಿದ್ದಾರೆ. ಇನ್ನು ಅಧಿಕಾರಿಗಳು ನಿರಂತವಾಗಿ ನಡೆಯುವ ಸಭೆಗಳಲ್ಲಿ ಶಾಸಕರು, ಸಚಿವರಿಗೆ ಗಿಳಿ ಪಾಠ ಹೇಳಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 24/7 ಎನ್ನುವ ಕುಡಿವ ನೀರಿನ ಯೋಜನೆ ಅವಳಿ ನಗರದ ಜನತೆಗೆ ನಿರಂತರ ತೊಂದರೆ ಕೊಡುವ ಯೋಜನೆಯಾಗಿಯೇ ಉಳಿದಿದೆ.ಇದು ನಮ್ಮ ಪಕ್ಷದ ಶಾಸಕರಾಗಿದ್ದ ದಿ. ಶ್ರೀಶೈಲಪ್ಪ ಬಿದರೂರ ಅವಧಿಯಲ್ಲಿ ಮಂಜೂರಾದ ಯೋಜನೆಯಾಗಿದೆ. ಆದರೆ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೇ ಕಾಲಕಾಲಕ್ಕೆ ಮಾರ್ಪಾಡು ಮಾಡುತ್ತಾ ಬಂದ ಹಿನ್ನೆಲೆಯಲ್ಲಿ ಯೋಜನೆ ಸ್ವರೂಪವೇ ಬದಲಾಗಿ ಹೋಗಿದೆ. ಸಾಕಷ್ಟು ಕಳಪೆ ಕಾಮಗಾರಿಯಾಗಿದ್ದು, ಯೋಜನೆ ಪೂರ್ಣಗೊಳ್ಳುವ ಮೊದಲೇ ಉದ್ಘಾಟಿಸಿ ಅವಳಿ ನಗರದ ಜನತೆಗೆ ಮೋಸ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಹೇಳಿದರು.