ದೀಕ್ಷಾ ಭೂಮಿಯಾತ್ರೆ ರಥಕ್ಕೆ ಚಾಲನೆ

KannadaprabhaNewsNetwork | Published : Oct 23, 2023 12:16 AM

ಸಾರಾಂಶ

ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಶೈಲಿ ಹಾಗೂ ಸೈದ್ಧಾಂತಿಕ ನಿಲುವು ಸರ್ವಕಾಲಕ್ಕೂ ಆದರ್ಶನೀಯ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಶೈಲಿ ಹಾಗೂ ಸೈದ್ಧಾಂತಿಕ ನಿಲುವು ಸರ್ವಕಾಲಕ್ಕೂ ಆದರ್ಶನೀಯ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ಅಂಬೇಡ್ಕರ್ ಅವರು ಸತತ ಅಧ್ಯಯನದ ಮೂಲಕ ಬದುಕು ಕಟ್ಟಿಕೊಳ್ಳುತ್ತಾರೆ. ಸರಳಜೀವನ ಶೈಲಿಯನ್ನು ರೂಪಿಸಿಕೊಂಡು ಬದುಕಿನುದ್ದಕ್ಕೂ ಆದರ್ಶನ ಜೀವನ ನಡೆಸುತ್ತಾರೆ.

ಬಾಬಾ ಸಾಹೇಬ್ ಅವರ ಜೀವನ ಹಾಗೂ ಸರಳ ಬದುಕು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ವಿಚಾರಗಳು ಹಾಗೂ ಜನಪರ ನಿಲುವುಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್. ಸತೀಶ್ ಮಾತನಾಡಿ, ಪ್ರತಿವರ್ಷ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಅನುಯಾಯಿಗಳಿಗೆ ದೀಕ್ಷಾಭೂಮಿ ಯಾತ್ರೆ ಎಂಬ ಕಾರ್ಯಕ್ರಮ ಮಾಡಿ ಅಂಬೇಡ್ಕರ್ ದೀಕ್ಷಾ ಪಡೆದ ಸ್ಥಳಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈ ವರ್ಷ 160 ಜನರನ್ನು ಅಂಬೇಡ್ಕರ್ ಅವರ ದೀಕ್ಷಾ ಸ್ಥಳಕ್ಕೆ ಕಳುಹಿಸಲಾಗುತ್ತಿದೆ ಎಂದರು.

ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಮತಾ, ಸಂಡೂರಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವೆಂಕಟೇಶ್ ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.

Share this article