ಮೊದಲ ಬಾರಿ ಹಳಿಯಲ್ಲಿ ಓಡಿದ ಚಾಲಕ ರಹಿತ ಮೆಟ್ರೋ ರೈಲು

KannadaprabhaNewsNetwork | Updated : Mar 08 2024, 12:42 PM IST

ಸಾರಾಂಶ

ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು ಪ್ರಪ್ರಥಮವಾಗಿ ಹಳಿಯಲ್ಲಿ ಸಂಚರಿಸಿತು. ಇದೇ ವೇಳೆ ಹಲವು ಪರೀಕ್ಷೆಗಳನ್ನು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚೀನಾದಿಂದ ಬಂದ ಚಾಲಕ ರಹಿತ ಮೆಟ್ರೋ ರೈಲು ಹಳದಿ ಮಾರ್ಗದಲ್ಲಿ ಗುರುವಾರ ರಾತ್ರಿ ಮೊದಲ ಬಾರಿಗೆ ಬೊಮ್ಮಸಂದ್ರದಿಂದ ಬೊಮ್ಮನಹಳ್ಳಿವರೆಗೆ ಪ್ರಾಯೋಗಿಕ ಸಂಚಾರ ನಡೆಸಿದ್ದು, ಕನಿಷ್ಠ 10 ಕಿ.ಮೀ. ವೇಗದಿಂದ ಗರಿಷ್ಠ 25 ಕಿ.ಮೀ. ವೇಗದವರೆಗೆ ರೈಲು ಓಡಿದೆ.

ಚೀನಾದಿಂದ ಆಗಮಿಸಿದ ಎಂಜಿನಿಯರ್‌ಗಳು ಸೇರಿ ಬೆಂಗಳೂರು ಮೆಟ್ರೋ ರೈಲು ನಿಗಮದ ತಂತ್ರಜ್ಞರು ರೈಲಿನಲ್ಲಿ ಸಂಚರಿಸಿದ್ದು, ಚಾಲಕರು ರೈಲನ್ನು ನಿರ್ವಹಿಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಈ ವೇಳೆ ರೈಲಿನ ವೇಗ, ವಿದ್ಯುತ್ ಪ್ರವಹಿಸುವಿಕೆ ಸೇರಿ ಇನ್ನಿತರ ಅಂಶಗಳನ್ನು ಎಂಜಿನಿಯರ್‌ಗಳು ದಾಖಲಿಸಿಕೊಂಡಿದ್ದಾರೆ.

ಹೆಬ್ಬಗೋಡಿ ಡಿಪೋದಿಂದ ಸಂಜೆ 6.55ಕ್ಕೆ ಹೊರಟ ರೈಲು 10 ಕಿ.ಮೀ. ವೇಗದಲ್ಲಿ ಸಂಚಾರ ಆರಂಭಿಸಿತು. 7.14ಕ್ಕೆ ಬೊಮ್ಮಸಂದ್ರ ತಲುಪಿತು. ಅಲ್ಲಿಂದ 25 ಕಿ.ಮೀ. ವೇಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿ ಬೊಮ್ಮನಹಳ್ಳಿಯನ್ನು 8.5ಕ್ಕೆ ತಲುಪಿತು. ಬಳಿಕ 9.11ಕ್ಕೆ ವಾಪಸ್ ತಲುಪಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌) ಆಧಾರಿತವಾಗಿ ಸಂಚರಿಸಲಿರುವ ಮಾದರಿ ರೈಲು ಇದಾಗಿದ್ದು, ಇದೇ ಮೊದಲ ಬಾರಿ ನಗರದಲ್ಲಿ ಸಂಚರಿಸಿದೆ. ಡಿಟಿಜಿ (ಡಿಸ್ಟೆನ್ಸ್ ಟು ಗೋ) ಸಿಗ್ನಲ್‌ ಮಾದರಿಯ ಮೆಟ್ರೋ ರೈಲುಗಳು ಸದ್ಯ ನಗರದಲ್ಲಿ ಸಂಚರಿಸುತ್ತಿವೆ. 

ಡಿಟಿಜಿ ಆಧಾರಿತ ಮೂಲ ಮಾದರಿಯ ಇನ್ನೊಂದು ರೈಲನ್ನು ಚೀನಾದ ಸಿಆರ್‌ಆರ್‌ಸಿ ಪೂರೈಸಬೇಕಿದೆ. ಉಳಿದಂತೆ 34 ರೈಲು ಸೆಟ್‌ (14 ಸಿಬಿಟಿಸಿ & 20 ಡಿಟಿಜಿ) ರೈಲುಗಳನ್ನು ಪಶ್ಚಿಮ ಬಂಗಾಳದ ತೀತಾಘರ್‌ ರೈಲ್‌ ಸಿಸ್ಟಮ್ಸ್‌ ಲಿಮಿಟೆಡ್‌ ಪೂರೈಸಲಿದೆ.

ಕಳೆದ ವಾರದಿಂದಲೇ ಈ ರೈಲಿನ ತಪಾಸಣೆ ಆರಂಭವಾಗಿದೆ. ಇನ್ನು ನಿಗದಿತವಾಗಿ ಹಳಿಯ ಮೇಲೆ ವಿವಿಧ ಬಗೆಯ ಸುರಕ್ಷತಾ ಪರೀಕ್ಷೆಗಳು ನಡೆಯಲಿವೆ. ಆರ್‌ಡಿಎಸ್‌ಒ (ರಿಸರ್ಚ್‌ ಸೈನ್ಸ್‌ ಆ್ಯಂಡ್‌ ಸ್ಟ್ಯಾಂಡರ್ಡ್‌ ಆರ್ಗನೈಸೇಶನ್) ಮೂಲಕ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತಾಲಯ ತಪಾಸಣೆ ನಡೆಸಲಿವೆ. 

ಇವೆರಡು ಸಂಸ್ಥೆಗಳ ಶಿಫಾರಸುಗಳನ್ನು ರೈಲ್ವೇ ಮಂಡಳಿಗೆ ನೀಡಿ ಅಲ್ಲಿಂದ ಅನುಮತಿ ಬಂದ ಬಳಿಕ ವಾಣಿಜ್ಯ ಸೇವೆ ಆರಂಭವಾಗಲಿದೆ ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ.

Share this article