ಮಾದಕ ದ್ರವ್ಯಗಳ ಸೇವನೆಯು ಕೇವಲ ದೈಹಿಕ ಆರೋಗ್ಯ ಹಾಳು ಮಾಡುವುದಿಲ್ಲ. ಬದಲಾಗಿ ಕಾನೂನುಬಾಹಿರ ಚಟುವಟಿಕೆಗಳಿಗೆ ಎಡೆಮಾಡಿಕೊಟ್ಟು ವ್ಯಕ್ತಿಯ ಭವಿಷ್ಯವನ್ನೇ ನಾಶಮಾಡುತ್ತದೆ.
ಮಾದಕ ವಸ್ತುಗಳ ವಿರೋಧಿ ಜಾಗೃತಿ ಅಭಿಯಾನದಲ್ಲಿ ಪೊಲೀಸ್ ಉಪನಿರೀಕ್ಷಕ
ಕನ್ನಡಪ್ರಭ ವಾರ್ತೆ ಯಲ್ಲಾಪುರಮಾದಕ ದ್ರವ್ಯಗಳ ಸೇವನೆಯು ಕೇವಲ ದೈಹಿಕ ಆರೋಗ್ಯ ಹಾಳು ಮಾಡುವುದಿಲ್ಲ. ಬದಲಾಗಿ ಕಾನೂನುಬಾಹಿರ ಚಟುವಟಿಕೆಗಳಿಗೆ ಎಡೆಮಾಡಿಕೊಟ್ಟು ವ್ಯಕ್ತಿಯ ಭವಿಷ್ಯವನ್ನೇ ನಾಶಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿದ್ದು, ತಮ್ಮ ಗುರಿಯತ್ತ ಗಮನಹರಿಸಬೇಕು ಎಂದು ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ ಹೇಳಿದರು. ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾತೃಭೂಮಿ ಸೇವಾ ಪ್ರತಿಷ್ಠಾನ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾದಕ ವಸ್ತುಗಳ ವಿರೋಧಿ ಜಾಗೃತಿ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಶ್ರೀರಂಗ ಕಟ್ಟಿ ಮಾತನಾಡಿ, ಇಂದಿನ ಯುವಕರು ನಾಳಿನ ದೇಶದ ಆಸ್ತಿ. ಅವರು ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ. ಮಾದಕ ಮುಕ್ತ ಸಮಾಜ ನಿರ್ಮಾಣ ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯ. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ತೋರಿದ ಉತ್ಸಾಹ ಮತ್ತು ಬೀದಿ ನಾಟಕದ ಮೂಲಕ ನೀಡಿದ ಸಂದೇಶವು ಸಾರ್ವಜನಿಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ವಿಶ್ವಾಸ ನನಗಿದೆ. ಇಂತಹ ಕಾರ್ಯಕ್ರಮಗಳು ಕೇವಲ ಒಂದು ದಿನದ ಅರಿವಿನ ಕಾರ್ಯಕ್ರಮಗಳಾಗಿರದೇ ವಿದ್ಯಾರ್ಥಿಗಳ ನಿತ್ಯ ಜೀವನದ ಸಂಕಲ್ಪವಾಗಿ ಬದಲಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ್ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳು ಕೇವಲ ಅಂಕ ಗಳಿಸುವ ಕೇಂದ್ರಗಳಾಗಬಾರದು. ನಾವು ನೀಡುವ ಶಿಕ್ಷಣವು ವಿದ್ಯಾರ್ಥಿಗಳನ್ನು ಅಂಕಗಳಿಗಿಂತ ಮಿಗಿಲಾಗಿ, ಸಂಸ್ಕಾರವಂತರನ್ನಾಗಿ ರೂಪಿಸಬೇಕು. ಸಮಾಜದಲ್ಲಿನ ಪಿಡುಗುಗಳ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯವನ್ನು ಬೆಳೆಸುವುದೇ ನಿಜವಾದ ಶಿಕ್ಷಣ ಎಂದರು.
ಬೆಳಗ್ಗೆ ಪ್ರಥಮ ದರ್ಜೆ ಕಾಲೇಜಿನಿಂದ ವಿದ್ಯಾರ್ಥಿಗಳ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಜಾಗೃತಿ ಮೂಡಿಸಿತು.ಜಾಥಾದ ನಂತರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿ ನಂದಿತಾ ಭಾಗ್ವತ್ ತಂಡದವರು ಪ್ರದರ್ಶಿಸಿದ "ಮಾದಕ ದ್ರವ್ಯ ಎಂಬ ಭೂತ ಮತ್ತು ಪ್ರಜ್ಞೆ ಎಂಬ ಸಮಾಜ " ಎಂಬ ಬೀದಿ ನಾಟಕವು ನೆರೆದಿದ್ದ ಸಾರ್ವಜನಿಕರ ಮನಗೆದ್ದಿತು.ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು ಡಾ. ರವಿ ಶೇಷಗಿರಿ ಮಾದಕ ವಸ್ತುಗಳ ವಿರುದ್ಧ ಬಲವಾದ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರವಿ ಭಟ್ಟ, ಸಾಮಾಜಿಕ ಕಾರ್ಯಕರ್ತ ಜಗನ್ನಾಥ ರೇವಣಕರ್, ಮಾತೃಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಕೃಷ್ಣ ಭಟ್ಟ ನಾಯಕನಕೆರೆ, ಪತ್ರಕರ್ತ ಕೆ.ಎಸ್. ಭಟ್ಟ, ಕಾಲೇಜಿನ ಬೋಧಕ/ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವರ್ಗ, ಪೊಲೀಸ್ ಸಿಬ್ಬಂದಿ, ಮಾತೃಭೂಮಿ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಅಭಿಯಾನವನ್ನು ಯಶಸ್ವಿಗೊಳಿಸಿದರು. ಭಾಗಿರತಿ ಪ್ರಾರ್ಥಿಸಿದರು. ಆಶಾ ನಾಯಕ್ ನಿರ್ವಹಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.