ಅಂಕೋಲಾ: ಕಾರವಾರದ ಪ್ರಸಿದ್ಧ ಆಸ್ಪತ್ರೆಯಾದ ಪಿಕಳೆ ಆಸ್ಪತ್ರೆಯಲ್ಲಿ ಔಷಧ ವಿತರಕರಾಗಿ ಕೆಲಸ ಮಾಡುತ್ತಿದ್ದ ರಾಜೀವ ಪಿಕಳೆ (67) ಅವರು ಶುಕ್ರವಾರ ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯ ತಮ್ಮ ಮನೆಯ ತುಳಸಿಕಟ್ಟೆಯ ಎದುರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಳಸಿಕಟ್ಟೆಯ ಸನಿಹದಲ್ಲಿ ಕುಳಿತು ಡಬಲ್ ಬ್ಯಾರಲ್ ಗನ್‌ನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ.
ರಾಜೀವ ಪಿಕಳೆ ಮನೆಗೆ ಶ್ವಾನದಳ ಮತ್ತು ಬೆರಳಚ್ಚು ತಂತ್ರಜ್ಞರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.
ಹರಿದಾಡುತ್ತಿತ್ತು ಸುದ್ದಿ: ರಾಜೀವ ಅವರು ಆಸ್ಪತ್ರೆಗೆ ದಾಖಲಾದ ರೋಗಿಯೋರ್ವರಿಗೆ ಅವಧಿ ಮೀರಿದ ಮಾತ್ರೆ ನೀಡಿರುವ ವಿಚಾರವಾಗಿ ಸಾಮಾಜಿಕ ತಾಲತಾಣಗಳಲ್ಲಿ ವಿಡಿಯೋ ಭಾರಿ ವೈರಲ್ ಆಗಿತ್ತು. ಈ ಕುರಿತು ಸಾರ್ವಜನಿಕವಾಗಿ ಅವರು ಕ್ಷಮೆಯಾಚಿಸಿದ್ದರು ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸುತ್ತಿದ್ದ ರಾಜೀವ ಪಿಕಳೆ ಈ ಘಟನೆಯಿಂದ ನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತ ರಾಜೀವ ಅವರ ಸಹೋದರ ನಿತಿನ ಪಿಕಳೆ ಹೇಳಿದ್ದಾರೆ. ಅಲ್ಲದೇ ಅವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.ಪೊಲೀಸರು ಮನೆ ಪರಿಶೀಲಿಸುತ್ತಿರುವ ವೇಳೆ ಕೊಠಡಿಯ ಒಳಗೆ ಡೆತ್ ನೋಟ್ ದೊರೆತಿದ್ದು, ನನ್ನ ಸಾವಿಗೆ ನಾನೇ ಕಾರಣ ಹೊರತು ಮತ್ತೆ ಏನೂ ಇಲ್ಲ ಎಂದು ಬರೆದು ಸಹಿ ಹಾಕಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಅವಧಿ ಮೀರಿದ ಔಷಧಿ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.